ಭಾಸ್ಕರ ಹೆಗಡೆ ಅವರಿಗೆ ಪಿ.ಎಚ್.ಡಿ ಪದವಿ
ಉಜಿರೆ, ಅ.1: ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಭಾಸ್ಕರ ಹೆಗಡೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ.
ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ ಅವರ ಮಾರ್ಗದರ್ಶನದಲ್ಲಿ ‘ಪತ್ರಿಕೆಗಳ ಮೂಲಕ ಔಪಚಾರಿಕ ಶಿಕ್ಷಣ: ಕನ್ನಡ ಪ್ರಮುಖ ದೈನಿಕಗಳ ತೌಲನಿಕ ಅಧ್ಯಯನ’ ಶೀರ್ಷಿಕೆಯಲ್ಲಿ ಪಿ.ಎಚ್.ಡಿ ಮಹಾಪ್ರಬಂಧವನ್ನು ಸಲ್ಲಿಸಿದ್ದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳಕೋಡು ಗ್ರಾಮದವರಾದ ಭಾಸ್ಕರ ಹೆಗಡೆ ಅವರು ಉಜಿರೆ ಕಾಲೇಜಿನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಮಹತ್ವದ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಮೇಲುಸ್ತುವಾರಿ ನಿರ್ವಹಿಸಿದ್ದಾರೆ.
‘ಸಂಜೆವಾಣಿ’ ಪತ್ರಿಕೆಯಲ್ಲಿ ಮೂರು ವರ್ಷಗಳ ಕಾಲ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುವಾಣಿ ಮಾಸಪತ್ರಿಕೆಯಲ್ಲಿ 1993ರಿಂದಲೇ ಉಪಸಂಪಾದಕರಾಗಿ ಹಾಗೂ ಅಂಕಣಕಾರರಾಗಿಯೂ ಕಾರ್ಯೋನ್ಮುಖರಾಗಿದ್ದಾರೆ.
ಇವರು ಬರೆದ ಹತ್ತಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಯು.ಜಿ.ಸಿ ಮಾನ್ಯತೆ ಪಡೆದ ಜರ್ನಲ್‍ಗಳಲ್ಲಿ ಪ್ರಕಟವಾಗಿವೆ.
ಕನ್ನಡದ ಪ್ರಮುಖ ದೈನಿಕಗಳಲ್ಲಿಯೂ ಇವರ ಬರಹಗಳು ಪ್ರಕಟಗೊಂಡಿವೆ.