ಯೆಚೂರಿ ವಿರುದ್ಧ ಸುಳ್ಳು ಕೇಸು ಖಂಡಿಸಿ ಪ್ರತಿಭಟನೆ
ಮಂಗಳೂರು, ಸೆ 22: ನರೇಂದ್ರ ಮೋದಿ ಸರಕಾರದ ರೈತ-ಕಾರ್ಮಿಕ-ದಲಿತ-ಮಹಿಳಾ ವಿರೋಧಿ ನೀತಿಗಳ ವಿರುದ್ದ ಹಾಗೂ ದೆಹಲಿ ಗಲಭೆಯ ನೆಪದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಸರಕಾರದ ಧೋರಣೆ ಖಂಡಿಸಿ ಸಿ ಪಿ ಐ ಎಂ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಸಿ ಪಿ ಐ ಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ದೇಶದ ಉದ್ದಗಲಕ್ಕೂ ಹೋರಾಟಗಳನ್ನು ಹತ್ತಿಕ್ಕಲು ಹೋರಾಟದ ಮುಂಚೂಣಿ ನಾಯಕರನ್ನು ಜೈಲಿಗಟ್ಟಲು ಎಲ್ಲಾ ಪಿತೂರಿಗಳನ್ನು ಮೋದಿ ಸರಕಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವರ್ಷಕ್ಕೆ 2 ಕೋಟಿ ಉದ್ಯೋಗ ಸ್ರಷ್ಠಿಸುವುದಾಗಿ ಯುವಜನರಲ್ಲಿ ಭ್ರಮೆಯನ್ನು ಹುಟ್ಟಿಸಿ ಕಳೆದ 6 ವರ್ಷಗಳಲ್ಲಿ ಇರುವ ಉದ್ಯೋಗಗಳನ್ನೇ ನಾಶ ಮಾಡಿ,ದೇಶ ಕಟ್ಟಬೇಕಾದ ಯುವಜನತೆಯನ್ನು ಬೀದಿಪಾಲು ಮಾಡಿದೆ. ಸರಕಾರದ ಅನ್ಯಾಯಗಳನ್ನು ಜನತೆಗೆ ವಿವರಿಸಿದರೆ, ಅಂತಹವರನ್ನು ಜೈಲಿಗಟ್ಟಲಾಗುತ್ತಿದೆ,” ಎಂದು ಸಿ ಪಿ ಐ ಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
“ಎಂಟು ತಿಂಗಳ ಹಿಂದೆ ನಡೆದ ದೆಹಲಿ ಗಲಭೆಯ ನೆಪದಲ್ಲಿ ಸೀತಾರಾಮ ಯೆಚೂರಿಯವರ ಮೇಲೆ ಸುಳ್ಳು ಮೊಕದ್ದಮೆ ಹೂಡಿ ಜನರ ಧ್ವನಿಯನ್ನೇ ಇನ್ನಿಲ್ಲವಾಗಿಸುವ ಕುತಂತ್ರವನ್ನು ಹೆಣೆಯುತ್ತಿದೆ.ಎಡಪಂಥೀಯ ವಿಚಾರಧಾರೆಯನ್ನಾಗಲೀ, ಕಮ್ಯುನಿಷ್ಟರನ್ನಾಗಲೀ ಇನ್ನಿಲ್ಲವಾಗಿಸುವ ಬಿಜೆಪಿಗರ ಪಿತೂರಿ ಭಾರತ ದೇಶದಲ್ಲಿ ಎಂದಿಗೂ ಫಲಿಸುವುದಿಲ್ಲ,” ಎಂದು ಪ್ರತಿಕ್ರಿಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫೈ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಸಿ ಪಿ ಐ ಎಂ ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್,ಜಯಂತಿ ಬಿ.ಶೆಟ್ಟಿ,ಬಶೀರ್ ಪಂಜಿಮೊಗರು,ನವೀನ್ ಕೊಂಚಾಡಿ,ದಿನೇಶ್ ಶೆಟ್ಟಿ, ಸಿಐಟಿಯು ನಾಯಕರಾದ ಜಯಲಕ್ಷ್ಮಿ, ಉಮೇಶ್ ಶಕ್ತಿನಗರ, ಮನೋಜ್ ಉರ್ವಾಸ್ಟೋರ್, ದಯಾನಂದ ಕೊಪ್ಪಲಕಾಡು, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ, ಕ್ರಷ್ಣ,ರಘುವೀರ್,ಡಿವೈಎಫೈ ನಾಯಕರಾದ ಪ್ರಶಾಂತ್ ಉರ್ವಾಸ್ಟೋರ್,ಖಲೀಲ್ ಪಂಜಿಮೊಗರು, ನಾಗೇಂದ್ರ, ಮುಂತಾದವರು ಭಾಗವಹಿಸಿದ್ದರು.