ಅಡಿಕೆ ಬೆಳೆಗೆ ಹನಿ ನೀರಾವರಿಯನ್ನು ಅಳವಡಿಸಿ ಯಶಸ್ಸು ಕಂಡ ಪುತ್ತೂರಿನ ರೈತ ಮಹಿಳೆ
ಮಂಗಳೂರು ಸೆ 14:- ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ಬೆಳೆ. ಶತಮಾನಗಳಿಂದ ಇಲ್ಲಿನ ಅನೇಕ ರೈತರು ಅಡಿಕೆಯನ್ನೇ ಪ್ರಮುಖ ಕೃಷಿಯನ್ನಾಗಿ ಆರಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಕೃಷಿಯಲ್ಲಿ ಅನೇಕ ಆವಿಷ್ಕಾರಗಳು ಹಾಗೂ ಹೊಸ ಪ್ರಯತ್ನಗಳು ನಡೆದಿವೆ. ಅವುಗಳಲ್ಲಿ ಮಿತವಾದ ನೀರಿನ ಬಳಕೆಯಿಂದ ಕೃಷಿ ಮಾಡುವುದು ಒಂದು.
ಆದ್ದರಿಂದ ನೈಸರ್ಗಿಕ ವರದಾನವಾಗಿ ಸಿಕ್ಕಿರುವ ನೀರನ್ನು ಮಿತವಾಗಿ ಬಳಸಿ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಲು ರೈತರ ಆರ್ಥಿಕತೆಗೆ ಸಹಕಾರಿಯಾಗುವಂತೆ ತೋಟಗಾರಿಕೆ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಸದರಿ ಯೋಜನೆಯಡಿ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ. 90 ರಷ್ಟು ಸಹಾಯಧನವನ್ನು ಇಲಾಖಾ ವತಿಯಿಂದ ನೀಡಲಾಗುತ್ತಿದೆ.
ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಚಂದ್ರಾವತಿಯವರು ನೀರಿನ ನಿರ್ವಹಣೆಗಾಗಿ ಹಾಗೂ ಕೂಲಿ ಆಳುಗಳ ಸಮಸ್ಯೆಯಿಂದಾಗಿ ಬೇಸತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ನೀರಾವರಿಯ ಬಗ್ಗೆ ವಿಚಾರಿಸಿ, ಇಲಾಖೆಯ ಮಾರ್ಗದರ್ಶನದಲ್ಲಿ ಸುಮಾರು 0.3 ಹೆಕ್ಟೇರ್ ಅಡಿಕೆ ಪ್ರದೇಶಕ್ಕೆ ಹನಿ ನೀರಾವರಿಯನ್ನು ಅಳವಡಿಕೊಂಡಿದ್ದಾರೆ. ಇವರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನವನ್ನು ಪಾವತಿಸಲಾಗಿದೆ.
“ಸಾಧ್ಯವಾದಷ್ಟು ಕಡಿಮೆ ಖರ್ಚು, ಮಿತನೀರು ಬಳಕೆ, ಬೆಳೆ ನಿರ್ವಹಣೆ ಮತ್ತು ಅಧಿಕ ಆದಾಯ ರೈತನ ದೃಷ್ಠಿಕೋನ ಅಲ್ಲವೇ” ಎನ್ನುತ್ತಾರೆ ಚಂದ್ರಾವತಿಯವರು. ಹನಿ ನೀರಾವರಿಯಲ್ಲಿ ಪ್ರತೀ ದಿನವೂ ಬೆಳೆಗೆ ಬೇಕಾದ ಪ್ರಮಾಣದಲ್ಲಿ ನೀರನ್ನು ಕೊಡುವುದರಿಂದ ತೇವಾಂಶವು ಹೆಚ್ಚಿನ ಬಿಗಿತವಿಲ್ಲದೆ ಬೆಳೆಗೆ ಒಂದೇ ಸಮನೆ ದೊರೆಯವುದರಿಂದ ಯಾವುದೇ ಕಾಲದಲ್ಲಿ ನೀರಿನ ಕೊರತೆ ಇಲ್ಲ, ಕಳೆಯ ಸಮಸ್ಯೆಯೂ ಇಲ್ಲ, ಕೂಲಿ ವೆಚ್ಚದಲ್ಲಿ ಉಳಿತಾಯವಾಗಿದೆ ಎಂದು ಅಭಿಪ್ರಾಯ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗೆ ದ.ಕ. ಜಿಲ್ಲೆಯ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯತಜ್ಞರು ರಿಶಲ್ ಡಿಸೋಜ – 8277806372 ಸಂಪರ್ಕಿಸಲು ಮಂಗಳೂರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Also read: Uttara Kannada completes intensive survey of elderly