ರುಗೋಸ್ ಸುರುಳಿಯಾಕಾರದ ಬಿಳಿನೋಣದ ಹಾವಳಿ

 ರುಗೋಸ್ ಸುರುಳಿಯಾಕಾರದ ಬಿಳಿನೋಣದ ಹಾವಳಿ
Share this post

ಚಿಕ್ಕಮಗಳೂರು.ಸೆ,೦೮: ಜಿಲ್ಲೆಯ ಕೆಲ ಭಾಗಗಳಲ್ಲಿ ರುಗೋಸ್ ಸುರುಳಿಯಾಕಾರದ ಬಿಳಿ ನೋಣವು ತೆಂಗು, ಬಾಳೆ, ತರಕಾರಿ ಮತ್ತು ಹಲವು ಅಲಂಕಾರಿಕ ಗಿಡಗಳಲ್ಲಿ ಕಂಡು ಬಂದಿದ್ದು, ತೆಂಗು ಮತ್ತು ಅಡಿಕೆ ಗಿಡಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತಿದೆ.

ಬಿಳಿ ನೋಣಗಳನ್ನು ಗುರುತಿಸಬಹುದಾದ ಲಕ್ಷಣಗಳೆಂದರೆ ಇದು ರಸ ಹೀರುವ ಕೀಟವಾಗಿದ್ದು, ಗಾತ್ರದಲ್ಲಿ ಚಿಕ್ಕದಾಗಿದ್ದು, ಮೈ ತುಂಬ ಬಿಳಿ ಬಣ್ಣದ ಮೇಣದಂತಹ ಹುಡಿ ಇರುತ್ತದೆ. ಕೀಟವು ಹಳದಿ ಮೈ ಬಣ್ಣದಿಂದ ಕೂಡಿದ್ದು, ೪ ಬಿಳಿ ಬಣ್ಣದ ರೆಕ್ಕೆಗಳನ್ನು ಹೊಂದಿದೆ. ಈ ಕೀಟವು ತನ್ನ ಎಲ್ಲಾ ಜೀವನದ ಅವಧಿಯನ್ನು ಎಲೆಗಳ ಕೆಳಭಾಗದಲ್ಲಿ ಕಳೆಯುತ್ತದೆ. ಕೀಟವು ಪ್ರಾರಂಭಿಕ ಹಂತದಲ್ಲಿ ಎಲೆಗಳ ಆಡಿಯಲ್ಲಿ ವೃತ್ತಾಕಾರದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಸದರಿ ಕೀಟವು ಗಾಳಿಯ ಮೂಲಕ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುತ್ತದೆ.

ಬಿಳಿನೊಣದ ಹಾನಿಯ ಲಕ್ಷಣಗಳೆಂದರೆ ಮರಿಗಳು ಹಾಗೂ ಫ್ರೌಢಕೀಟಗಳು ಸತತವಾಗಿ ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ರಸ ಹೀರುವಿಕೆಯೊಂದಿಗೆ ನೀರು ಮತ್ತು ಪೌಷ್ಠಿಕಾಂಶಗಳನ್ನು ತೆಗೆದು ಹಾಕುವುದರಿಂದ ತೆಂಗಿನ ಎಲೆಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಆದ್ದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಮುದುಡುತ್ತವೆ, ಕ್ರಮೇಣವಾಗಿ ಒಣಗಲು ಪ್ರಾರಂಭಿಸುತ್ತವೆ. ಕೀಟಗಳ ವ್ಯಾಪಕವಾದ ರಸ ಹೀರುವಿಕೆಯಿಂದ ಸಿಹಿ ದ್ರವ ಸ್ರವಿಸುತ್ತದೆ. ಈ ಸಿಹಿಯಾದ ದ್ರವವು ಕೆಳಗಿನ ಎಲೆಗಳ ಮೇಲ್ಭಾಗದಲ್ಲಿ ಮತ್ತು ಅಂತರ ಬೆಳೆಗಳ ಮೇಲೆ ಸಂಗ್ರಹವಾಗುತ್ತದೆ. ಎಲೆಗಳ ಮೇಲೆ ಸ್ರವಿಸಿದ ಸಿಹಿ ದ್ರವ ಇರುವೆಗಳನ್ನು ಆಕರ್ಷಿಸುತ್ತದೆ ಮತ್ತು ಕ್ಯಾಪ್ನೋಡಿಯಂ ಎಂಬ ಶಿಲೀಂದ್ರದ ಬೆಳೆವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಶಿಲೀಂದ್ರ ಮಸಿ ಬಳಿದಂತೆ ಕಾಣಿಸಿಕೊಳ್ಳುತ್ತದೆ ಹಾಗೂ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ.

ರುಗೋಸ್ ಸುರುಳಿಯಾಕಾರದ ಬಿಳಿನೋಣಗಳನ್ನು ನಿಯಂತ್ರಿಸುವ ಕ್ರಮಗಳು
ಕೀಟಬಾಧೆಗೆ ಒಳಪಟ್ಟ ಗಿಡಗಳ ಎಲೆಗಳನ್ನು ಕಿತ್ತು ತೆಗೆದು ಸುಡಬೇಕು. ಕೀಟ-ಪೀಡಿತ ವಲಯಗಳಿಂದ ತೆಂಗಿನ ಸಸಿಗಳು ಉಪಯೋಗಿಸುವಂತಹ ವಸ್ತುಗಳು, ಮಣ್ಣು ಮತ್ತು ಸಾವಯವ ವಸ್ತುಗಳು ಇತ್ಯಾದಿ ಸಾಗಿಸುವ ಮುನ್ನ ಸಂಪೂರ್ಣವಾಗಿ ತನಿಖೆಗೆ ಒಳಪಡಿಸಬೇಕು.

ಹಳದಿ ಬಣ್ಣದ ಬಲೆಗಳನ್ನು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್‌ಗೆ ಹರಳೆಣ್ಣೆ ಹಚ್ಚಿ ಅಲ್ಲಲ್ಲಿ ತೋಟದಲ್ಲಿ ನೇತು ಹಾಕಬೇಕು. ಹಳದಿ ಬಣ್ಣವು ಕೀಟವನ್ನು ಆಕರ್ಷಿಸುವುದರಿಂದ ಕೀಟಗಳ ಬಲೆಗಳಿಗೆ ಅಂಟಿಕೊಳ್ಳುತ್ತವೆ. ಎನ್ಕಾರ್ಸಿಯಾ ಗ್ವಾಡೆಲೊಪೆ ಹಾಗೂ ’ಎನ್ಕಾರ್ಸಿಯಾ ಡಿಸ್ಟರ್ಸಾ’ ಎಂಬ ಎರಡು ಪರಾವಲಂಬಿ ಕೀಟಗಳು ಬಿಳಿನೋಣದ ಮೊಟ್ಟೆಗಳನ್ನು ತಿಂದು ಬದುಕುವುದರಿಂದ ಈ ಕೀಟಗಳ ಸಂತತಿ ಬೆಳೆಯುವಂತೆ ಮಾಡಬೇಕಾಗಿರುವುದರಿಂದ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಬೇಕಾಗಿರುತ್ತದೆ.

ತೋಟದ ಪರಿಸರದ ವ್ಯವಸ್ಥೆಯಲ್ಲಿ ಕಪ್ಪು ಶಿಲೀಂಧ್ರವನ್ನು ಭಕ್ಷಿಸುವ ಜೀರುಂಡೆ ಲಿಯೋಕ್ರಿನಸ್ ನೀಲ್ಗೀರಿಯಾನಸ್ (Leiochrinus nilgirianus) ಹುಳಗಳನ್ನು ಸಂರಕ್ಷಿಸಬೇಕು. ಎಲೆಗಳ ಕೆಳಭಾಗದಲ್ಲಿ ಕೂತಿರುವ ಕೀಟಗಳಿಗೆ ನೀರು ಬಿಡಬೇಕು ಹಾಗೂ ಎಲೆಗಳ ಮೇಲೆ ಬೆಳೆದಿರುವ ಕಪ್ಪು ಶಿಲೀಂಧ್ರ ನಿಯಂತ್ರಿಸಲು ಗಂಜಿ ನೀರನ್ನು ಉಪಯೋಗಿಸಬೇಕು.

ಕೀಟಗಳ ಬಾಧೆ ತೀವ್ರವಾಗಿದ್ದು, ಗಿಡಗಳ ಎತ್ತರ ಕಡಿಮೆ ಇದ್ದಲ್ಲಿ ೦.೫% ಬೇವಿನ ಎಣ್ಣೆ ಮತ್ತು ೨.೫ ಮೀ.ಲೀ ಶ್ಯಾಂಪು ಒಂದು ಲೀಟರ್ ನೀರಿಗೆ ಬೆರೆಸಿ ಮರಗಳಿಗೆ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಾರ್ಟಿಕ್ಲಿನಿಕ್, ವಿಷಯ ತಜ್ಞ ಯಶವಂತ್ ದೂ.ಸಂ: ೦೮೨೬೨-೨೯೫೦೪೩, ೮೬೧೮೧೮೬೫೮೬. ಅಥವಾ ಹತ್ತಿರದ ತೋಟಗಾರಿಕೆ ಇಲಾಖೆಯ ಆರ್.ಎಸ್.ಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Subscribe to our newsletter!

Other related posts

error: Content is protected !!