ಪ.ಜಾತಿ/ಪ.ಪಂಗಡದ ಎಲ್ಲಾ ಯೋಜನೆಗಳ ಸಂಪೂರ್ಣ ಅನುಷ್ಠಾನ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

 ಪ.ಜಾತಿ/ಪ.ಪಂಗಡದ ಎಲ್ಲಾ ಯೋಜನೆಗಳ ಸಂಪೂರ್ಣ ಅನುಷ್ಠಾನ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ
Share this post

ಮಂಗಳೂರು ನ 06:- ಪ್ರಸ್ತುತ ಸಾಲಿನ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ನೀಡಿರುವ ಯೋಜನೆಗಳ ಹಾಗೂ ಯೋಜನೇತರ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶುಕ್ರವಾರ ತಮ್ಮ ಕಚೇರಿಯ  ಸಭಾಂಗಣದಲ್ಲಿ ವಿಶೇಷ ಘಟಕ/ ಗಿರಿಜನ ಉಪಯೋಜನೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ಧೇಶಿಸಿ ಮಾತನಾಡಿದರು.

ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಗತ್ಯ ಮೂಲಭೂತ ಸೌಲಭ್ಯಗಳು ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು, ಚೆನ್ನದಾಸ ಸಮುದಾಯದವರು ತಮಗೆ ಜಾತಿ ಪ್ರಮಾಣ ಪತ್ರವನ್ನು ಕೋರಿ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಕಾನೂನಿನ ನಿಯಮಾನುಸಾರ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಅವರು ಚೆನ್ನದಾಸ ಸಮುದಾಯಕ್ಕೆ ಸೇರಿದ್ದಾರೆ ಎಂಬುವುದರ ಬಗ್ಗೆ ಖಾತ್ರಿ ಪಡೆಸಿಕೊಂಡು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಬೇಕು.

ಗೊಂದಲಗಳು ಇದ್ದಂತಹ ಸಂದರ್ಭದಲ್ಲಿ ಸ್ಥಳ ಪರಿಶೀಲನೆಯ ಜೊತೆಗೆ ಸಮುದಾಯದ ಪದಾಧಿಕಾರಿಗಳ ಸಹಾಯ ಪಡೆದು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಕೆಲವೊಮ್ಮೆ ಚೆನ್ನದಾಸ ಸಮುದಾಯದವರಿಗೆ ತಾಲೂಕು ಕಚೇರಿಯ ವತಿಯಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ತಿರಸ್ಕರಿಸಿದರೆ ಅಂತಹ ಸಂದರ್ಭದಲ್ಲಿ ವಿಭಾಗೀಯ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಸಹಾಯಕ ಆಯುಕ್ತ ರವೀಂದ್ರ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಯೋಗಿಶ್ ಎಸ್. ಬಿ, ನಗರಾಭಿವೃದ್ಧಿ ಯೋಜನೆಯ ನಿರ್ದೇಶಕಿ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ, ಮಂಗಳೂರು ಮಹಾನಗರಪಾಲಿಕೆಯ ಉಪಆಯುಕ್ತ ಡಾ. ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!