‘ಗೃಹ ರಕ್ಷಕ ದಳ’ ಬದಲು ‘ಪ್ಯಾರಾ ಪೊಲೀಸ್ ಫೋರ್ಸ್’ ಎಂಬ ನಾಮಕರಣವಾಗಲಿ
ಚುನಾವಣೆ, ಬಂದೋ ಬಸ್ತ್, ಕೊರೊನಾ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಹತ್ತು ಹಲವು ಸಂದರ್ಭಗಳಲ್ಲಿ ಪೊಲೀಸರಂತೆ ಕಾರ್ಯನಿರ್ವಹಿಸುವ ಗೃಹಬರಕ್ಷಕ ಸಿಬ್ಬಂದಿಗಳ ಕಾರ್ಯವನ್ನು ಮೆಚ್ಚಿಕೊಳ್ಳಬೇಕು.
ಆದರೆ ಸಮಯ, ಸಂದರ್ಭ ನೋಡದೆ ಕಷ್ಟದ ಸ್ಥಿತಿಯಲ್ಲಿಯೂ ಕೆಲಸ ಮಾಡುತ್ತಿರುವ ಗೃಹ ರಕ್ಷಕ ದಳ(ಹೋಮ್ ಗಾರ್ಡ್) ಹುದ್ದೆಯ ಹೆಸರನ್ನು ಪ್ಯಾರಾ ಪೊಲೀಸ್ ಫೋರ್ಸ್ (ಅರೆ ಆರಕ್ಷಕರ ಪಡೆ) ಎಂದು ಬದಲಾಯಿಸಬೇಕು ಎಂಬ ಆಗ್ರಹವನ್ನು ಮಾನ್ಯ ಗೃಹ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರ ಮುಂದಿಡುತ್ತೇನೆ.
ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಆಸ್ಪತ್ರೆ, ನಗರದ ಜನನಿಬಿಡ ಸ್ಥಳಗಳು ಸೇರಿದಂತೆ ಹಲವೆಡೆ ನಿಂತು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಈ ಸಿಬ್ಬಂದಿಗೆ ಆರೇಳು ತಿಂಗಳು ಕಳೆದರೂ ವೇತನವಾಗಿಲ್ಲ ಎಂಬ ದೂರು ಇದೆ. ಕೆಲ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸಿಬ್ಬಂದಿಗೆ ಕೂಡಲೆ ವೇತನ ಪಾವತಿಸಬೇಕು.
ಕಳೆದ ಏಳೆಂಟು ತಿಂಗಳಿನಿಂದ ಕೋವಿಡ್ ಪರಿಸ್ಥಿತಿಯಲ್ಲಿ ಜೀವದ ಹಂಗುತೊರೆದು ಕೆಲಸ ಮಾಡಿರುವ ಗೃಹರಕ್ಷಕರನ್ನು (ಪ್ಯಾರಾ ಪೊಲೀಸ್ ಫೋರ್ಸ್) ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೂ ಆಶಾ ಕಾರ್ಯಕರ್ತೆಯರಿಗೆ ನೀಡಿದಂತೆ ಗೌರವಧನ ನೀಡಲು ಸರ್ಕಾರ ಮುಂದಾಗಬೇಕು.
ಉದ್ಯೋಗ ಭದ್ರತೆ, ಕನಿಷ್ಠ ವೇತನ ಮತ್ತು ಆರೋಗ್ಯ, ವಿಮೆ ಸೌಲಭ್ಯಗಳನ್ನೂ ಈ ಸಿಬ್ಬಂದಿಗೆ ಒದಗಿಸಲು ತುರ್ತು ಕ್ರಮವಾಗಲಿ ಎಂದು ಆಗ್ರಹಿಸುತ್ತೇನೆ.