ಯೂತ್ ಆಫ್ ಜಿ ಎಸ್ ಬಿ ಯಿಂದ 4 ದಿನಗಳ ಆನ್ ಲೈನ್ ವಾಣಿಜ್ಯ ಉತ್ಸವ
- ನಾಲ್ಕು ದಿನಗಳ ಆನ್ ಲೈನ್ ವಾಣಿಜ್ಯ ಉತ್ಸವ ಅಕ್ಟೋಬರ್ 15 ರಂದು ಪ್ರಾರಂಭ
- ಕನಿಷ್ಟ 300 ವ್ಯವಹಾರಿಕ ಸಂಸ್ಥೆಗಳು ಭಾಗಿಯಾಗಲಿವೆ
- ಹೆಸರು ನೋಂದಾಯಿಸಲು ಯಾವುದೇ ಶುಲ್ಕ ಇಲ್ಲ
- 50 ಕ್ಕೂ ಹೆಚ್ಚು ಮಹಿಳಾ ಉದ್ದಿಮೆದಾರರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ.
ಮಂಗಳೂರು ಅ 14: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣ ಮತ್ತು ಟಿವಿ ವಾಹಿನಿಗಳ ಮೂಲಕ ಪ್ರಚಾರಪಡಿಸುತ್ತಾ ಜಿಎಸ್ ಬಿ ಸಮುದಾಯದ ಪ್ರೀತಿ, ವಿಶ್ವಾಸವನ್ನು ಗಳಿಸಿರುವ ಯೂತ್ ಆಫ್ ಜಿಎಸ್ ಬಿ ಸಂಘಟನೆ ಮತ್ತೊಂದು ವಿನೂತನ ಕಾರ್ಯಕ್ರಮವನ್ನು ಸಮುದಾಯದ ಜನರಿಗಾಗಿ ತಂದಿದೆ.
ಈ ಬಾರಿ ಜಿಎಸ್ ಬಿ ಸಮಾಜದ ಉದ್ದಿಮೆದಾರರಿಗಾಗಿ ಆನ್ ಲೈನ್ ಬ್ಯುಸಿನೆಸ್ ಎಕ್ಸಫೋ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಯೂತ್ ಆಫ್ ಜಿಎಸ್ ಬಿ ಆಯೋಜಿಸಿದ್ದು, ಇದಕ್ಕೆ ಹೆಸರು ನೋಂದಾಯಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಈ ನಾಲ್ಕು ದಿನಗಳ ಆನ್ ಲೈನ್ ವಾಣಿಜ್ಯ ಉತ್ಸವ ಅಕ್ಟೋಬರ್ 15 ರಂದು ಪ್ರಾರಂಭವಾಗಲಿದ್ದು, ಕನಿಷ್ಟ 300 ವ್ಯವಹಾರಿಕ ಸಂಸ್ಥೆಗಳು ಭಾಗಿಯಾಗಲಿವೆ. ಉದ್ದಿಮೆದಾರರು ಆನ್ ಲೈನ್ ಮೂಲಕ ತಮ್ಮ ಉತ್ಪನ್ನಗಳನ್ನು ಜಾಗತಿಕವಾಗಿ ತೆರೆದಿಡಲಿದ್ದಾರೆ.
ಜಗತ್ತು ಕೊರೋನಾ ಮಹಾಮಾರಿಯ ವಿರುದ್ಧ ಸೆಣಸಾಡುತ್ತಿರುವ ಈ ಹಂತದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ತಮ್ಮ ಮನೆ ಅಥವಾ ವ್ಯವಹಾರ ಕೇಂದ್ರದಲ್ಲಿಯೇ ಕುಳಿತುಕೊಂಡು ಆನ್ ಲೈನ್ ಮೂಲಕ ಕೊಡು-ಕೊಳ್ಳುವಿಕೆ ವ್ಯವಹಾರ ನಡೆಸುವ ಮಾದರಿ ವೇದಿಕೆಯನ್ನು ಯೂತ್ ಆಫ್ ಜಿಎಸ್ ಬಿ ಸಂಘಟನೆ ಆಯೋಜಿಸಿದೆ.
ಯಾವುದೇ ಖರ್ಚಿಲ್ಲದೆ ಉದ್ದಿಮೆದಾರರು ತಮ್ಮ ಹೆಸರು ಮತ್ತು ಇತರ ಮಾಹಿತಿಗಳನ್ನು ಯೂತ್ ಆಫ್ ಜಿಎಸ್ ಬಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಉಪ್ಪಿನಕಾಯಿಯಂತಹ ಗೃಹೋಪಯೋಗಿ ಉತ್ಪನ್ನಗಳಿಂದ ಹಿಡಿದು ಆಟೋಮೋಬೈಲ್ ಮಳಿಗೆಗಳ ತನಕ ಸುಮಾರು 300 ವಿವಿಧ ವಾಣಿಜ್ಯ ವ್ಯವಹಾರ ಸಂಸ್ಥೆಗಳು ಈ ಉತ್ಸವದಲ್ಲಿ ಭಾಗವಹಿಸಲು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. 50 ಕ್ಕೂ ಹೆಚ್ಚು ಮಹಿಳಾ ಉದ್ದಿಮೆದಾರರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ.
” ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ನೂತನ ಯೋಜನೆ ” ವೋಕಲ್ ಫಾರ್ ಲೋಕಲ್” ಉದ್ದೇಶವನ್ನು ಸಮರ್ಥವಾಗಿ ಅನುಷ್ಟಾನಗೊಳಿಸುವ ಪ್ರಕ್ರಿಯೆಗೆ ದೇಶಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಯೂತ್ ಆಫ್ ಜಿಎಸ್ ಬಿ ಸಂಘಟನೆ ಪ್ರಧಾನಿಯವರ ದೂರದೃಷ್ಟಿಯ ಈ ಯೋಜನೆಯಲ್ಲಿ ಭಾಗಿಯಾಗಲು ಬಯಸುತ್ತಿದೆ,” ಎಂದು ಯೂತ್ ಆಫ್ ಜಿಎಸ್ ಬಿ ಸಂಚಾಲಕರಾದ ಮಂಗಲ್ಪಾಡಿ ನರೇಶ್ ಶೆಣೈಯವರು ಹೇಳಿದರು.
“ಈ ನಿಟ್ಟಿನಲ್ಲಿ ಜಿಎಸ್ ಬಿ ಸಮುದಾಯದಲ್ಲಿ ಅಸಂಖ್ಯಾತ ವಾಣಿಜ್ಯ ಉತ್ಪಾದಕರಿದ್ದು, ಅವರ ಉತ್ಪನ್ನಗಳಿಗೆ ಆಧುನಿಕ ವೇದಿಕೆಯನ್ನು ಕಲ್ಪಿಸುವ ಪ್ರಯತ್ನವನ್ನು ನಮ್ಮ ಸಂಘಟನೆ ಮಾಡುತ್ತಿದೆ. ಈ ಸವಾಲಿನ ದಿನಗಳಲ್ಲಿ ನಮ್ಮ ಸಮುದಾಯದ ವ್ಯಾಪಾರಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಹೊಸ ಭರವಸೆಯ ಬೆಳಕನ್ನು ತೋರಿಸುವುದರಲ್ಲಿ ನಾವು ಯಶಸ್ವಿಯಾದರೆ ನಮ್ಮ ಪ್ರಯತ್ನ ಸಾರ್ಥಕ” ಎಂದು ಅವರು ಹೇಳಿದರು.
ಫಿನ್ ಪವರ್ ಸಂಸ್ಥೆ ಈ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದ್ದು, ಎಸ್ ವಿಸಿ ಕೋ- ಆಪರೇಟಿವ್ ಬ್ಯಾಂಕ್ ಸಹಪ್ರಾಯೋಜಕತ್ವವನ್ನು ವಹಿಸಿದೆ.