ಕಂದಾಯ ದಾಖಲೆ ಮನೆ ಬಾಗಿಲಿಗೆ: ಜಿಲ್ಲಾಧಿಕಾರಿ
- ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ ಶನಿವಾರ ಜಿಲ್ಲೆಯಾದ್ಯಂತ ನಡೆಯಲಿದೆ
- ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿರುವ ರೈತರ ಮನೆ ಮನೆಗೆ ಭೇಟಿ
- ರೈತರಿಗೆ ಮುದ್ದಾಂ ವಿತರಿಸಲು ಸಾಧ್ಯವಾಗದೇ ಇದ್ದಲ್ಲಿ , ಅಂತಹ ರೈತರಿಗೆ ಮಾರ್ಚ್ 21 ರಿಂದ 26 ರ ವರೆಗೆ ವಿಶೇಷ ಅಭಿಯಾನ
ಉಡುಪಿ, ಮಾ 11, 2022: ಸಾರ್ವಜನಿಕರಿಗೆ ಕಂದಾಯ ಇಲಾಖೆವತಿಯಿಂದ ನೀಡಲಾಗುತ್ತಿರುವ ಮೂಲ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮವು ಶನಿವಾರ ಬೆಳಗ್ಗೆ 11 ಗಂಟೆಗೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್,ಹಿಸ್ಸಾ ಸ್ಕೆಚ್,ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣಪತ್ರಗಳನ್ನು,ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿರುವ ರೈತರ ಮನೆ ಮನೆಗೆ ಭೇಟಿ, ಉಚಿತವಾಗಿ ವಿತರಿಸಲಾಗುವುದು.
ಇದಕ್ಕಾಗಿ ಜಿಲ್ಲೆಯ 1,73,979 ರೈತರಿಗೆ ಸಂಬಂಧಿಸಿದ, 6,61,979 ಪಹಣಿಗಳು, 13,10,481 ಜಾತಿ ಪ್ರಮಾಣ ಪತ್ರ, 8,01,851 ಆದಾಯ ಪ್ರಮಾಣ ಪತ್ರಗಳು ಮತ್ತು 4,62,861 ಅಟ್ಲಾಸ್ ಗಳನ್ನು ವಿತರಿಸಲು ಗುರಿ ಹೊಂದಲಾಗಿದ್ದು, ಈಗಾಗಲೇ 3,79,824 ಪಹಣಿ, 2,13,081 ಜಾತಿ ಮತ್ತು ಆದಾಯ ಪ್ರಮಾಣ ಪತ್ರ 25,081 ಅಟ್ಲಾಸ್ ಗಳನ್ನು ಮುದ್ರಣ ಮಾಡಿ ವಿತರಿಸಲು ಸಿದ್ದಪಡಿಸಿಕೊಳ್ಳಲಾಗಿದ್ದು, ಈ ಎಲ್ಲಾ ದಾಖಲಾತಿಗಳನ್ನು ಕುಟುಂಬವಾರು ಜೋಡಿಸಿ, ಕಂದಾಯ ಇಲಾಖೆ ಸಿಬ್ಬಂದಿಗಳ ಮೂಲಕ ಜಿಲ್ಲೆಯ 267 ಕಂದಾಯ ಗ್ರಾಮಗಳ ರೈತರ ಮನೆ ಬಾಗಿಲಿಗೆ ವಿತರಿಸಲಾಗುವುದು ಎಂದರು.
ಒಂದು ವೇಳೆ ದಾಖಲೆಗಳು ಮುದ್ರಣವಾಗದೇ , ರೈತರಿಗೆ ಮುದ್ದಾಂ ವಿತರಿಸಲು ಸಾಧ್ಯವಾಗದೇ ಇದ್ದಲ್ಲಿ , ಅಂತಹ ರೈತರಿಗೆ ಮಾರ್ಚ್ 21 ರಿಂದ 26 ರ ವರೆಗೆ ವಿಶೇಷ ಅಭಿಯಾನದ ಮೂಲಕ , ಜಿಲ್ಲೆಯ ತಾಲೂಕು ಕಚೇರಿ, ನಾಡ ಕಚೇರಿ, ಗ್ರಾಮ ಲೆಕ್ಕಾದಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಗುವುದು, ದಾಖಲೆಗಳನ್ನು ಪಡೆದ ರೈತರು ಗ್ರಾಮ ಕರಣಿಕರ ಬಳಿ ಇರುವ ಸ್ವೀಕೃತಿಯಲ್ಲಿ ದಾಖಲೆ ಪಡೆದ ಬಗ್ಗೆ ದೂರವಾಣಿ ಸಂಖ್ಯೆಯೊAದಿಗೆ ಸಹಿ ನಮೂದಿಸುವಂತೆ ತಿಳಿಸಿದರು.
ಮಾರ್ಚ್ 12 ರಂದು ಉಡುಪಿ ತಾಲೂಕಿನ ತೆಂಕನಿಡಿಯೂರು, ಕಾಪು ವಿನ ಉಳಿಯಾರುಗೋಳಿ, ಬ್ರಹ್ಮಾವರದ ಚೇರ್ಕಾಡಿ, ಕಾರ್ಕಳದ ಕುಕ್ಕಂದೂರು, ಹೆಬ್ರಿಯ ಹೆಬ್ರಿ, ಕುಂದಾಪುರದ ಕರ್ಕುಂಜೆ, ಬೈಂದೂರು ನ ಕಾಲ್ತೋಡು ನಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.