ಪೊಲೀಸರ ತ್ಯಾಗ,ಬಲಿದಾನ ಅವಿಸ್ಮರಣೀಯ: ಕೂರ್ಮಾರಾವ್
ಉಡುಪಿ, ಅ 21, 2021: ಪೊಲೀಸರ ತ್ಯಾಗ, ಬಲಿದಾನ ಅವಿಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಅವರು ಇಂದು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಚಂದು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಪೋಲಿಸ್ ಹುತಾತ್ಮ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿ ಮಾತನಾಡಿದರು.
ಯಾವುದೇ ಅಸಾಧಾರಣ ಸನ್ನಿವೇಶದಲ್ಲೂ ಸಹ ವಿಶೇಷ ಸೇವೆ ಸಲ್ಲಿಸುವ ಪೊಲೀಸರು, ತುರ್ತು ಪರಿಸ್ಥಿತಿ, ಕ್ಲಿಷ್ಟಕರ ಪರಿಸ್ಥಿತಿ, ಪ್ರಾಕೃತಿಕ ವಿಕೋಪ ಪರಿಸ್ಥಿತಿಯಲ್ಲೂ ಸಹ ಎದೆಗುಂದದೇ ಕಾರ್ಯ ನಿರ್ವಹಿಸುತ್ತಾರೆ, ಸಮಾಜದಲ್ಲಿ ಜನತೆ ಶಾಂತಿ ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಪೊಲೀಸರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದೇ ಕಾರಣ. ಉಡುಪಿ ಜಿಲ್ಲೆಯಲ್ಲಿ ಪೊಲೀಸರು ಅತ್ಯಂತ ಸುವ್ಯವಸ್ಥಿತವಾಗಿ ಯೋಜನಾ ಬದ್ದವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಜಿಲ್ಲಾಡಳಿತದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ಎಸ್ಪಿ ವಿಷ್ಣುವರ್ಧನ್ ಪೊಲೀಸ್ ಹುತಾತ್ಮರ ದಿನಾಚರಣೆಯ ಮಹತ್ವದ ಬಗ್ಗೆ ಹಾಗೂ 2020 ಸೆಪ್ಟಂಬರ್ 1 ರಿಂದ 2021 ಆಗಸ್ಟ್ 31 ರ ವರೆಗೆ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾದ ಕರ್ನಾಟಕದ 16 ಮಂದಿ ಸೇರಿದಂತೆ ದೇಶದ ಒಟ್ಟು 377 ಪೊಲೀಸರ ನಾಮಸ್ಮರಣೆ ಮಾಡಿ, ಹುತಾತ್ಮ ಪೊಲೀಸರ ಗೌರವಾರ್ಥ 3 ಸುತ್ತು ಗುಂಡು ಹಾರಿಸಲಾಯಿತು, ಎರಡು ನಿಮಿಷಗಳ ಮೌನಾಚರಣೆ ನಡೆಯಿತು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು.
ಪ್ರೋಬೆಷನರ್ ಆರ್.ಎಸ್.ಐ ಪುನೀತ್ ಕುಮಾರ್ ಪರೇಡ್ ನೇತೃತ್ವ ವಹಿಸಿದ್ದರು. ಕರಾವಳಿ ಕಾವಲು ಪೊಲೀಸ್ ನ ಎಸ್.ಐ. ಬಿ.ಮನಮೋಹನ್ ರಾವ್ ನಿರೂಪಿಸಿದರು.
ಐಪಿಎಸ್ ತರಬೇತಿ ನೆನೆಪಿಸಿಕೊಂಡ ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ತಾವು ಐಪಿಎಸ್ ತರಬೇತಿಯಲ್ಲಿದ್ದಾಗ ಅಕಾಡೆಮಿಯಲ್ಲಿ, ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಮೊದಲು ಸಮಾಜಕ್ಕಾಗಿ ಕರ್ತವ್ಯ ನಿರ್ವಹಿಸಬೇಕು, ಎರಡನೇಯದಾಗಿ ತಮ್ಮ ಜೊತೆಯಲ್ಲಿರುವ ಸಹೋದ್ಯೋಗಿಗಳ ರಕ್ಷಣೆಗೆ ಮತ್ತು ಅಂತಿಮವಾಗಿ ತನ್ನ ಪ್ರಾಣದ ಕುರಿತು ಯೋಚಿಸಬೇಕು ಎಂದು ತಿಳಿಸಿದ್ದರು, ಪೊಲೀಸರು ಎಂದೆಂದಿಗೂ ಅದೇ ರೀತಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.