ಆಗಸ್ಟ್ ವೇಳೆಗೆ 6 ಕೋಟಿ ತಲುಪಲಿರುವ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ
ನವದೆಹಲಿ, ಮೇ 29, 2021: ಈ ವರ್ಷದ ಜನವರಿ 16ರಿಂದ ‘ಸಂಪೂರ್ಣ ಸರ್ಕಾರ’ ವಿಧಾನದ ಅಡಿಯಲ್ಲಿ ಪರಿಣಾಮಕಾರಿ ಲಸಿಕೆ ಅಭಿಯಾನದ ಅನುಷ್ಠಾನಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಭಾರತ ಸರ್ಕಾರ ಬೆಂಬಲ ನೀಡುತ್ತಿದೆ.
ಲಸಿಕೆ ಲಭ್ಯತೆಯನ್ನು ಸುವ್ಯವಸ್ಥಿತಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರವು ಲಸಿಕೆ ತಯಾರಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, 2021ರ ಮೇ ಯಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿಭಿನ್ನ ಖರೀದಿ ಆಯ್ಕೆಗಳನ್ನು ನೀಡಿದೆ.
ಭಾರತ್ ಬಯೋಟೆಕ್ ನ ಲಸಿಕೆ ಕುರಿತಂತೆ ಕೆಲವು ಆಧಾರ ರಹಿತ ವರದಿಗಳು ಬಂದಿವೆ. ಈ ವರದಿಗಳು ಸರಿಯಾದವುಗಳಲ್ಲ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದನ್ನು ಬೆಂಬಲಿಸುವುದಿಲ್ಲ. ಭಾರತ್ ಬಯೋಟೆಕ್ 6 ಕೋಟಿ ಡೋಸ್ ಗಳನ್ನು ಹೊಂದಿದೆ ಎಂಬ ವಿಷಯ ಕುರಿತಂತೆ ಕೆಲವು ವಲಯಗಳ ವರದಿಯಲ್ಲಿ ಲೋಪವಾಗಿದೆ ಎಂದು ಅರೋಗ್ಯ ಇಲಾಖೆ ಹೇಳಿದೆ.
ದೇಶೀಯವಾಗಿ ಉತ್ಪಾದಿಸಲಾಗುತ್ತಿರುವ ಕೋವ್ಯಾಕ್ಸಿನ್ ನ ಪ್ರಸಕ್ತ ಉತ್ಪಾದನಾ ಸಾಮರ್ಥ್ಯ 2021ರ ಮೇ-ಜೂನ್ ಹೊತ್ತಿಗೆ ದುಪ್ಪಟ್ಟಾಗಲಿದೆ ಮತ್ತು ಜುಲೈ- ಆಗಸ್ಟ್ ಹೊತ್ತಿಗೆ 6-7 ಪಟ್ಟು ಹೆಚ್ಚಳವಾಗಲಿದೆ. ಅಂದರೆ 2021ರ ಏಪ್ರಿಲ್ ನಲ್ಲಿದ್ದ ಮಾಸಿಕ 1 ಕೋಟಿ ಲಸಿಕೆ ಡೋಸ್ ನಿಂದ ಜುಲೈ – ಆಗಸ್ಟ್ ನಲ್ಲಿ ಮಾಸಿಕ 6-7 ಕೋಟಿ ಲಸಿಕೆ ಡೋಸ್ ಉತ್ಪಾದನೆಗೆ ಹೆಚ್ಚಲಿದೆ. ಸೆಪ್ಟೆಂಬರ್ ವೇಳೆಗೆ ಇದು ತಿಂಗಳಿಗೆ ಸುಮಾರು 10 ಕೋಟಿ ಡೋಸ್ ತಲುಪುವ ನಿರೀಕ್ಷೆಯಿದೆ.
ದೇಶೀಯ ಕೋವಿಡ್ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ತ್ವರಿತಗೊಳಿಸಲು, ಆತ್ಮನಿರ್ಭರ ಭಾರತ್ 3.0 ಕೋವಿಡ್ ಸುರಕ್ಷಾ ಅಭಿಯಾನ ಅಡಿಯಲ್ಲಿ ಕೈಗೊಂಡ ಕೋವಾಕ್ಸಿನ್ ನ ಈ ಸಾಮರ್ಥ್ಯ ವರ್ಧನೆಯನ್ನು ಭಾರತ ಸರ್ಕಾರ ಘೋಷಿಸಿದ್ದು, ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಜಾರಿಗೆ ತರಲಾಗಿದೆ.
ಲಸಿಕೆ ವೈದ್ಯಕೀಯ ಮಹತ್ವದ ಜೈವಿಕ ಉತ್ಪನ್ನವಾಗಿದ್ದು, ಇದರ ಸಂಪೂರ್ಣ ಸಂಗ್ರಹಣೆ ಮತ್ತು ಗುಣಮಟ್ಟದ ಪರೀಕ್ಷೆಗೆ ಸಮಯ ತೆಗೆದುಕೊಳ್ಳುತ್ತದೆ. ಸುರಕ್ಷಿತ ಉತ್ಪನ್ನದ ಖಾತ್ರಿಯನ್ನು ದಿನಬೆಳಗಾಗುವುದರಲ್ಲಿ ಮಾಡಲಾಗುವುದಿಲ್ಲ. ಆದ್ದರಿಂದ ಉತ್ಪಾದನಾ ಸಾಮರ್ಥ್ಯದ ಹೆಚ್ಚಳಕ್ಕೆ ಮಾರ್ಗದರ್ಶಿ ಪ್ರಕ್ರಿಯೆಯ ಅಗತ್ಯವಿರುತ್ತದೆ ಮತ್ತು ಒಟ್ಟು ಉತ್ಪಾದನೆಯ ಹೆಚ್ಚಳವು ತಕ್ಷಣದ ಪೂರೈಕೆಯಾಗಿ ಪರಿವರ್ತಿಸಲಾಗುವುದಿಲ್ಲ.
2021ರ ಮೇ 28ರಂದು ಬೆಳಗ್ಗೆ ಭಾರತ್ ಬಯೋಟೆಕ್ 2,76,66,860 ಲಸಿಕೆ ಡೋಸ್ ಗಳನ್ನು ಭಾರತ ಸರ್ಕಾರಕ್ಕೆ ಪೂರೈಕೆ ಮಾಡಿದೆ. ಈ ಪೈಕಿ ಲಸಿಕೆ ವ್ಯರ್ಥವಾಗಿರುವುದೂ ಸೇರಿದಂತೆ ಒಟ್ಟು 2,20,89,880 ಡೋಸ್ ಗಳನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಸಕ್ತ ನಡೆದಿರುವ ಕೋವಿಡ್ -19 ಲಸಿಕಾ ಅಭಿಯಾನದಲ್ಲಿ ಬಳಸಿಕೊಂಡಿವೆ.
ಇದರೊಂದಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವ ಉಳಿಕೆ ಲಸಿಕೆ 55,76,980 ಡೋಸ್ ಗಳಾಗಿವೆ. ಖಾಸಗಿ ಆಸ್ಪತ್ರೆಗಳು 13,65,760 ಡೋಸ್ ಕೋವ್ಯಾಕ್ಸಿನ್ ಅನ್ನು ಇದೇ ತಿಂಗಳಲ್ಲಿ ಪಡೆದುಕೊಂಡಿದ್ದು, ಇದು ಭಾರತ ಸರ್ಕಾರ ಮತ್ತು ರಾಜ್ಯಗಳಿಗೆ ಪೂರೈಕೆ ಮಾಡಲಾಗಿರುವ ಲಸಿಕೆಗಿಂತ ಹೆಚ್ಚಾಗಿಯೇ ಇದೆ.
ಮೇ 2021ರ ಮಾಸದಲ್ಲಿ, ಹೆಚ್ಚುವರಿಯಾಗಿ 21,54,440 ಡೋಸ್ ಕೋವ್ಯಾಕ್ಸಿನ್ ಪೂರೈಸಬೇಕಾಗಿದೆ. ಇದು ಈವರೆಗೆ ಸರಬರಾಜು ಮಾಡಲಾದ ಮತ್ತು ರವಾನೆಯ ಪ್ರಕ್ರಿಯೆಯಲ್ಲಿರುವ ಒಟ್ಟು ಲಸಿಕೆ ಸಂಖ್ಯೆ 3,11,87,060 ಡೋಸ್ ಆಗುತ್ತದೆ. ಉತ್ಪಾದಕರು ಜೂನ್ ತಿಂಗಳಿಗೆ ಸುಮಾರು 90,00,000 ಡೋಸ್ ಪೂರೈಕೆಗೆ ಬದ್ಧವಾಗಿದ್ದಾರೆ.