ಅಧಿಕ ಇಳುವರಿಯ ಮತ್ತು ಕೀಟ-ನಿರೋಧಕ ಹೊಸ ಸೋಯಾಬೀನ್ ತಳಿ ದೇಶಾದ್ಯಂತ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯಕ
ಭಾರತೀಯ ವಿಜ್ಞಾನಿಗಳು ಅಧಿಕ ಇಳುವರಿ ನೀಡುವ ಮತ್ತು ಕೀಟ-ನಿರೋಧಕ ಸೋಯಾಬೀನ್ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಹೊಸದಾಗಿ ಅಭಿವೃದ್ಧಿಪಡಿಸಲಾದ, ಎಂಎಸಿಎಸ್ 1407 ಎಂದು ಕರೆಯಲಾಗುವ ತಳಿಯು ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ಗಢ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೃಷಿಗೆ ಸೂಕ್ತವಾಗಿದೆ. ಅದರ ಬೀಜಗಳನ್ನು 2022ರ ಮುಂಗಾರು ಋತುವಿನಲ್ಲಿ ಬಿತ್ತನೆಗಾಗಿ ರೈತರಿಗೆ ಲಭ್ಯವಾಗುವಂತೆ ಮಾಡಲಾಗುವುದು.
2019ರಲ್ಲಿ, ಭಾರತವು ಸುಮಾರು 90 ದಶಲಕ್ಷ ಟನ್ ಸೋಯಾಬೀನ್ ಅನ್ನು ಉತ್ಪಾದಿಸಿದೆ. ಇದನ್ನು ತೈಲ ಬೀಜಗಳಾಗಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಜೊತೆಗೆ ಪ್ರಾಣಿಗಳ ಆಹಾರಕ್ಕಾಗಿ ಮತ್ತು ಅನೇಕ ಪ್ಯಾಕೇಜ್ಡ್ ಆಹಾರ ಪದಾರ್ಥಗಳಲ್ಲಿ ಪ್ರೋಟೀನ್ನ ಅಗ್ಗದ ಮೂಲವಾಗಿ ಬಳಸುವ ಉದ್ದೇಶಕ್ಕೂ ಬೆಳೆಯಲಾಗುತ್ತದೆ. ವಿಶ್ವದ ಪ್ರಮುಖ ಸೋಯಾಬೀನ್ ಉತ್ಪಾದಕ ದೇಶಗಳಲ್ಲಿ ಒಂದೆನಿಸಲು ಭಾರತವು ಪ್ರಯತ್ನಿಸುತ್ತಿದೆ. ದ್ವಿದಳ ಧಾನ್ಯಗಳ ಅಧಿಕ ಇಳುವರಿ, ರೋಗ ನಿರೋಧಕ ತಳಿಗಳು ಈ ಗುರಿಯನ್ನು ಸಾಧಿಸಲು ಸಹಾಯಕವಾಗವಾಗುತ್ತವೆ.
ಈ ಸವಾಲನ್ನು ಸ್ವೀಕರಿಸಿದ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯ ಸ್ವಾಯತ್ತ ಸಂಸ್ಥೆಯಾದ ಪುಣೆಯ ಎಂಎಸಿಎಸ್-ಅಗರ್ಕರ್ ಸಂಶೋಧನಾ ಸಂಸ್ಥೆಯ (ಎಆರ್ಐ) ವಿಜ್ಞಾನಿಗಳು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯು(ಐಸಿಎಆರ್) ಸಹಯೋಗದೊಂದಿಗೆ ಹೆಚ್ಚಿನ ಇಳುವರಿ ನೀಡುವ ಸೋಯಾಬಿನ್ ತಳಿಯನ್ನು ಹಾಗೂ ಅದನ್ನು ಬೆಳೆಯಲು ಸುಧಾರಿತ ಪದ್ಧತಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಸಾಂಪ್ರದಾಯಿಕ ಕ್ರಾಸ್ ಬ್ರೀಡಿಂಗ್ ತಂತ್ರವನ್ನು ಬಳಸಿಕೊಂಡು ಅವರು ʻಎಂಎಸಿಎಸ್ 1407ʼ ಅನ್ನು ಅಭಿವೃದ್ಧಿಪಡಿಸಿದರು. ಇದು ಪ್ರತಿ ಹೆಕ್ಟೇರ್ಗೆ 39 ಕ್ವಿಂಟಾಲ್ ಫಸಲನ್ನು ನೀಡುತ್ತದೆ. ಇದು ಹೆಚ್ಚಿನ ಇಳುವರಿ ನೀಡುವ ತಳಿಯಾಗಿದೆ ಮತ್ತು ಜೀರುಂಡೆ, ಎಲೆ ಕೊರಕ, ಎಲೆ ಸುರುಳಿ ಕೀಟ, ಕಾಂಡದ ನೊಣ, ಗಿಡ ಹೇನು, ಬಿಳಿ ನೊಣ ಮತ್ತು ವಿಪರ್ಣಕಗಳಂತಹ ಪ್ರಮುಖ ಕೀಟ-ಕೀಟಗಳ ಪ್ರತಿರೋಧಕವಾಗಿದೆ. ಅದರ ದಪ್ಪ ಕಾಂಡ, ನೆಲಮಟ್ಟದಿಂದ ಎತ್ತರದಲ್ಲಿ ಕಾಯಿ ಬಿಡುವುದು (7 ಸೆಂ.ಮೀ) ಮತ್ತು ಕಾಯಿ ಒಡಕಿನ ಪ್ರತಿರೋಧವು ಯಾಂತ್ರಿಕ ಕೊಯ್ಲಿಗೆ ಸಹ ಈ ತಳಿಯನ್ನು ಸೂಕ್ತವಾಗಿದೆ. ಈಶಾನ್ಯ ಭಾರತದ ಮಳೆ-ಆಶ್ರಿತ ಪರಿಸ್ಥಿತಿಗಳಿಗೆ ಇದು ಅತ್ಯಂತ ಸೂಕ್ತವಾಗಿದೆ.
ಈ ಕೆಲಸದ ನೇತೃತ್ವ ವಹಿಸಿದ್ದ ʻಎಆರ್ಐʼ ವಿಜ್ಞಾನಿ ಶ್ರೀ ಸಂತೋಷ್ ಜಯ್ಭಾಯ್ ಅವರು, “ಅತ್ಯುತ್ತಮ ಸೋಯಾಬಿನ್ ತಳಿಗಳೆಲ್ಲವುಕ್ಕಿಂತಲೂ ‘ಎಂಎಸಿಎಸ್ 1407’ ತಳಿಯು ಇಳುವರಿಯು ಶೇ. 17ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಜೊತೆಗೆ ಇತರೆ ಅರ್ಹ ತಳಿಗಳಿಗಿಂತಲೂ ಶೇ. 14-19ರಷ್ಟು ಹೆಚ್ಚಿನ ಇಳುವರಿ ಪ್ರಯೋಜನವನ್ನು ಪ್ರದರ್ಶಿಸಿದೆ. ಯಾವುದೇ ಇಳುವರಿ ನಷ್ಟವಿಲ್ಲದೆ ಜೂನ್ 20ರಿಂದ ಜುಲೈ 5ರವರೆಗೆ ಬಿತ್ತನೆಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ. ಇದು ಇತರ ತಳಿಗಳಿಗೆ ಹೋಲಿಸಿದರೆ ಮುಂಗಾರಿನ ವೈಪರೀತ್ಯಗಳಿಗೆ ಪ್ರತಿರೋಧಕತೆ ಹೊಂದಿದೆ,ʼʼ ಎಂದು ಹೇಳಿದರು.
ʻಎಂಎಸಿಎಸ್ 1407ʼ ತಳಿಯು 50% ಹೂಬಿಡಲು ಸರಾಸರಿ 43 ದಿನಗಳು ಬೇಕಾಗುತ್ತವೆ ಮತ್ತು ಬಿತ್ತನೆಯ ದಿನಾಂಕದಿಂದ ಪಕ್ವವಾಗಲು 104 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಬಿಳಿ ಬಣ್ಣದ ಹೂವುಗಳು, ಹಳದಿ ಬೀಜಗಳು ಮತ್ತು ಕಪ್ಪು ಬಣ್ಣದ ಬೀಜದ ಕಣ್ಣನ್ನು (ಹೈಲಂ) ಹೊಂದಿರುತ್ತದೆ. ಇದರ ಬೀಜಗಳು ಶೇ. 19.81% ತೈಲದ ಅಂಶವನ್ನು, 41% ಪ್ರೋಟೀನ್ ಅಂಶವನ್ನು ಹೊಂದಿವೆ ಮತ್ತು ಉತ್ತಮ ಮೊಳಕೆ ಸಾಮರ್ಥ್ಯವನ್ನೂ ಹೊಂದಿದೆ. ಈ ಅಧಿಕ ಇಳುವರಿಯ, ಕೀಟ ನಿರೋಧಕ, ಕಡಿಮೆ ನೀರು ಮತ್ತು ರಸಗೊಬ್ಬರವನ್ನು ಬಯಸುವ, ಯಾಂತ್ರಿಕ ಕೊಯ್ಲಿಗೆ ಸೂಕ್ತವಾದ ಸೋಯಾಬೀನ್ ತಳಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻಬೆಳೆ ಮಾನದಂಡಗಳು, ಅಧಿಸೂಚನೆ ಮತ್ತು ವಿವಿಧ ಕೃಷಿ ಬೆಳೆಗಳ ಬಿಡುಗಡೆ ಕುರಿತಾದ ಕೇಂದ್ರೀಯ ಉಪ ಸಮಿತಿʼಯು ಈ ತಳಿಯನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ಇದನ್ನು ಬೀಜ ಉತ್ಪಾದನೆ ಮತ್ತು ಕೃಷಿಗೆ ಕಾನೂನುಬದ್ಧವಾಗಿ ಲಭ್ಯವಾಗುವಂತೆ ಮಾಡಿದೆ.