45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಕ್ರಮ : ಜಿ. ಜಗದೀಶ್

 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ  ಲಸಿಕೆ ನೀಡಲು ಕ್ರಮ : ಜಿ. ಜಗದೀಶ್
Share this post

ಉಡುಪಿ, ಏಪ್ರಿಲ್ 05, 2021: ಕೋವಿಡ್ 2 ನೇ ಅಲೆಯನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಲು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ರಚಿಸಲಾಗಿರುವ ಕೋವಿಡ್ ನಿಯಂತ್ರಣ ಕುರಿತ ಕಾರ್ಯಪಡೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಕಾರ್ಯಪಡೆಗಳು ಶೀಘ್ರದಲ್ಲಿ ಸಭೆಗಳನ್ನು ನಡೆಸಿ ತಮ್ಮ ವ್ಯಾಪ್ತಿಯಲ್ಲಿನ 45 ವರ್ಷ ಮೇಲ್ಪಟ್ಟ ನಾಗರೀಕರನ್ನು ಗುರುತಿಸಿ ಅವರು ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಡಿಸಿ ಸೂಚಿಸಿದರು.

ಶಿಕ್ಷಣ ಇಲಾಖೆಯಲ್ಲಿ 45 ವರ್ಷ ಮೇಲ್ಪಟ್ಟ ಹಲವು ಶಿಕ್ಷಕರಿದ್ದು, ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ, ಅನುದಾನಿತ ಶಾಲೆಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರು ಲಸಿಕೆ ಪಡೆಯುವ ಕುರಿತಂತೆ ಸೂಚನೆ ನೀಡುವಂತೆ ಡಿಡಿಪಿಐಗೆ ಸೂಚಿಸಿದ ಜಿಲ್ಲಾಧಿಕಾರಿ, ಎಲ್ಲಾ ಖಾಸಗಿ ಬಸ್‌ಗಳ 45 ವರ್ಷ ಮೇಲ್ಪಟ್ಟ ಚಾಲಕರು ಮತ್ತು ನಿರ್ವಾಹಕರು ಲಸಿಕೆ ಪಡೆಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಎಲ್ಲಾ ಅಟೋ ಮತ್ತು ಟ್ಯಾಕ್ಸಿ ಚಾಲಕರು, ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಹೋಟೆಲ್ ಕಾರ್ಮಿಕರು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಜಿಲ್ಲಾಡಳಿತದ ಮೂಲಕ ಪತ್ರ ಬರೆದು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಮಾಡಲಾಗುವುದು.

ಚರ್ಚ್, ಮಸೀದಿಗಳು ಸೇರಿದಂತೆ ಎಲ್ಲಾ ಧಾರ್ಮಿಕ ಪ್ರದೇಶದಲ್ಲಿ ಕೋವಿಡ್ ಲಸಿಕೆ ಪಡೆಯುವ ಕುರಿತಂತೆ ತಿಳಿಸಲಾಗುವುದು ಮತ್ತು ವಕ್ಫ್ ಇಲಾಖೆ ಅಧಿಕಾರಿಗಳು ಮಸೀದಿಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಲಸಿಕೆ ಪಡೆಯುವ ಕುರಿತು ಅಗತ್ಯ ಸಂದೇಶ ನೀಡುವಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಇಲ್ಲ. ಅಲ್ಲದೆ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೇ ಇದ್ದು ಸಾರ್ವಜನಿಕರು ನಿರ್ಭೀತಿಯಿಂದ ಲಸಿಕೆ ಪಡೆಯಬಹುದು.

ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಸತೀಶ್ಚಂದ್ರ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಎಲ್ಲಾ ಜಿಲ್ಲೆಗಳಲ್ಲಿ ಕೈಗೊಂಡಿರುವ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಹಾಗೂ ಉಡುಪಿ ನಗರ ವ್ಯಾಪ್ತಿಯಲ್ಲಿ ರಿಸ್ಕ್ ಜಾಸ್ತಿ ಇದ್ದು, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡುವುದು ಅಗತ್ಯವಿದೆ.

ಸಭೆಯಲ್ಲಿ ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಜಿಲ್ಲಾ ಕೋವಿಡ್ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಕೋವಿಡ್ ವಿಶೇಷಾಧಿಕಾರಿ ಡಾ.ಪ್ರೇಮಾನಂದ, ಜಿಲ್ಲಾ ಕೋವಿಡ್ ಲಸಿಕಾ ಅಧಿಕಾರಿ ಡಾ. ಎಂ.ಜಿ.ರಾಮ ಹಾಗೂ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!