ಕೊಟ್ಟ ಮಾತಿಗೆ ಬದ್ಧಳಾಗಿ 6 ಕೋಟಿ ರೂ ತಿರಸ್ಕರಿಸಿದ ಆದರ್ಶ ಮಹಿಳೆ
ಮಂಗಳೂರು, ಮಾರ್ಚ್ 24, 2021: “ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು…” ಈ ಸಾಲುಗಳು ಕವನಗಳು ಮತ್ತು ಕಾಲ್ಪನಿಕ ಕಥೆಗಳಲ್ಲಿ ಮಾತ್ರ ಕಂಡುಬರುತ್ತವೆ ಎಂದು ಹಲವರು ಭಾವಿಸಿದರೆ, ಈ ಮಹಿಳೆ ಅವುಗಳನ್ನು ತಪ್ಪೆಂದು ಸಾಬೀತುಪಡಿಸಿದ್ದಾಳೆ.
ತಮ್ಮ ಮಾತಿಗೆ ಬದ್ಧರಾಗುವ ಮತ್ತು ದುರಾಸೆಗೆ ಬಲಿಯಾಗದ ಜನರು ಇನ್ನೂ ಇದ್ದಾರೆ ಎಂದು ಜಗತ್ತಿಗೆ ಸಾರಿದ್ದಾಳೆ.
ಅನೇಕ ಜನರು ಹಣಕ್ಕಾಗಿ ಇತರರನ್ನು ದರೋಡೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಒಬ್ಬ ಮಹಿಳೆ 6 ಕೋಟಿ ರೂ. ಬಾಚಿಕೊಳ್ಳಲು ಅವಕಾಶವಿದ್ದರೂ, ತನ್ನ ಮಾತಿಗೆ ಬದ್ಧಳಾಗಿದ್ದಾಳೆ.
ಸ್ಮಿಜಾ ಮೋಹನ್ ಕೇರಳದ ವಾಲಂಪುರ ನಿವಾಸಿ. ಪಟ್ಟಿಮತ್ತಂನ ಭಾಗ್ಯಲಕ್ಷ್ಮಿ ಏಜೆನ್ಸಿ ಮೂಲಕ ಲಾಟರಿ ಟಿಕೆಟ್ ಮಾರುತ್ತಾಳೆ.
ಕೇರಳ ಕೌಮುದಿ ವರದಿಯ ಪ್ರಕಾರ ಆಕೆಯ ಹಿರಿಯ ಮಗ (13) ಮಿದುಳಿನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ, ಎರಡು ವರ್ಷದ ಕಿರಿಯ ಮಗ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾನೆ.
ಭಾನುವಾರ 6 ಕೋಟಿ ರೂ ಮೊದಲ ಬಹುಮಾನದ 12 ಟಿಕೆಟ್ ಗಳು ಬಾಕಿ ಉಳಿದಿದ್ದವು . ಹಲವರಿಗೆ ಫೋನ್ ಮಾಡಿ ಟಿಕೆಟ್ ಪಡೆಯುವಂತೆ ಕೇಳಿಕೊಂಡಳು. ನಿಯಮಿತವಾಗಿ ಖರೀದಿಸುವ ಚಂದ್ರನ್ ಆಕೆಯಲ್ಲಿ ಬಾಕಿ ಉಳಿದಿರುವ ಟಿಕೆಟುಗಳ ನಂಬರ್ ಗಳನ್ನು ಫೋನ್ ಮುಖಾಂತರ ಕೇಳಿ ಅವುಗಳಲ್ಲಿ (ಎಸ್ಡಿ 316142) ನಂಬರ್ ನ ಟಿಕೆಟ್ ಖರೀದಿಸುವ ಭರವಸೆ ನೀಡಿದರು.
ಅದರ ಮೊತ್ತ ೨೦೦ ರೂಪಾಯಿ ಮರುದಿನ ಪಾವತಿಸುವುದಾಗಿ ಹೇಳಿದರು.
ಆದರೆ ಸಂಜೆ ನಡೆದ ಡ್ರಾ ನಲ್ಲಿ ಎಸ್ಡಿ 316142 ಗೆ 6 ಕೋಟಿ ರೂ. ಬಹುಮಾನ ಗೆದ್ದ ವಿಷಯ ಆಕೆಯ ಗಮನಕ್ಕೆ ಬಂದಿತು. ಮನಸ್ಸು ಮಾಡಿದ್ದರೆ ಬಹುಮಾನವನ್ನು ತಾನೇ ಇಟ್ಟುಕೊಳ್ಳಬಹುದಿತ್ತು . ಆದರೆ ಅದೇ ದಿನ ಚಂದ್ರನ್ ಮನೆಗೆ ಹೋಗಿ ಟಿಕೆಟನ್ನು ಹಸ್ತಾಂತರಿಸಿ, ಅದರ ಮೊತ್ತ 200 ರೂಪಾಯಿ ಪಡೆದು ತನ್ನ ಎಂದಿನ ದಿನಚರಿಗೆ ಮರಳಿದಳು…