ತಂತ್ರಜ್ಞಾನದ ಸುರಕ್ಷತೆ ಬಗ್ಗೆ ಮಾಹಿತಿ ಅತ್ಯವಶ್ಯಕ: ಜಿಲ್ಲಾಧಿಕಾರಿ
ಮಂಗಳೂರು, ಮಾರ್ಚ್ 03, 2021: ದೈನಂದಿನ ಆಡಳಿತ ಕಾರ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. ಅವುಗಳ ಸುರಕ್ಷತೆಯ ಬಗ್ಗೆ ಅರಿವು ಹೊಂದುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ತಿಳಿಸಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಸಾಮಥ್ರ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಇ-ಆಡಳಿತ ಸಂಸ್ಥೆ, ಮೈಸೂರು ಹಾಗೂ ಇ-ಆಡಳಿತ ಕೇಂದ್ರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ “ಸೈಬರ್ ಸೆಕ್ಯುರಿಟಿ ಮತ್ತು ಇ- ಆಡಳಿತ ವಿಷಯಗಳ ಕುರಿತು ಜಿಲ್ಲೆಯ ಗ್ರೂಪ್ ’ಎ’ ಅಧಿಕಾರಿಗಳಿಗೆ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಸರಕಾರಿ ಸೇವೆಗಳು ಹಾಗೂ ಕೆಲಸಗಳನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಜನಸಾಮಾನ್ಯರಿಗೆ ಒದಗಿಸಲು ಪೂರಕವಾಗಿವೆ. ಅವುಗಳ ಮಾಹಿತಿಗಳು ಅಂತರ್ಜಾಲದಲ್ಲಿ ಸೋರಿಕೆಯಾಗದಂತೆ ಹಾಗೂ ಅವುಗಳ ದುರುಪಯೋಗವಾಗದಂತೆ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯಕ ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಸಂವಹನ ಅತ್ಯಂತ ಸುಲಭವಾಗಿದೆ. ಸರಕಾರಿ ವೆಬ್ಸೈಟ್ಗಳನ್ನು ಹ್ಯಾಕರ್ ಗಳು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದ ಅವರು ಸೈಬರ್ ಅಪಾಧಗಳ ಬಗ್ಗೆ ಅರಿವು ಹೊಂದಿದಾಗ ತಮಗಾದ ಮೋಸದ ಬಗ್ಗೆ ದೂರು ನೀಡಿ ನ್ಯಾಯ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಕಚೇರಿಯ ಕಂಪ್ಯೂಟರ್ ಮತ್ತು ಮೊಬೈಲ್ಗಳಲ್ಲಿ ಅಂತರ್ಜಾಲ ಬಳಕೆಯ ಉಪಯೋಗ ಪಡೆದುಕೊಳ್ಳಬೇಕು ಜೊತೆಗೆ ಅದರ ಅನಾನುಕೂಲತೆಗಳ ಬಗ್ಗೆ ಜಾಗೃತೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎನ್.ಐ.ಟಿ.ಕೆ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಲ್ವಿನ್ ರೋಷನ್ ಪೈಸ್ ಮಾತನಾಡಿ, ಆನ್ಲೈನ್ ವ್ಯವಹಾರ, ಬ್ಯಾಂಕಿಂಗ್ ಉಪಯೋಗಿಸುವಾಗ ಎಚ್ಚರ ವಹಿಸಬೇಕು.
ಕೆಲವೊಮ್ಮೆ ಅಪರಿಚಿತ ಮೊಬೈಲ್ ನಂಬರ್ ಗಳಿಂದ ಕರೆಯನ್ನು ಮಾಡಿ ಉದ್ಯೋಗ ಅಥವಾ ಸಾಲ ನೀಡುವ ಬಗ್ಗೆ ಭರವಸೆ ನೀಡುತ್ತಾರೆ. ಇದರ ಬಗ್ಗೆಯೂ ಅಧಿಕಾರಿಗಳು ಗಮನವಹಿಸಬೇಕು ಹಾಗೂ ಯಾವುದೇ ಮಾಹಿತಿಯನ್ನು ತಕ್ಷಣವೇ ನೀಡಬಾರದು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಂತಹ ತಂತ್ರಜ್ಞಾನಗಳನ್ನು ಉಪಯೋಗಿಸುತ್ತಿದ್ದಾರೆ. ಕ್ರೆಡಿಟ್ಕಾರ್ಡ್ ಮತ್ತು ಡೆಬಿಟ್ ಕಾರ್ಡ್ಗಳ ಪಾಸ್ವರ್ಡ್ಗಳನ್ನು ಯಾರ ಬಳಿಯು ಹಂಚಿಕೊಳ್ಳಬಾರದು ಇದರಿಂದ ವಂಚಕರು ಮಾಹಿತಿಯನ್ನು ಕದಿಯುವ ಸಂದರ್ಭಗಳು ಬರುತ್ತವೆ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವೆಂಕಟೇಶ್. ಜಿ, ವಿವಿಧ ಇಲಾಖೆಯ ಗ್ರೂಪ್-ಎ ಅಧಿಕಾರಿಗಳು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
