ಅಡಿಕೆಗೆ ಹಳದಿ ರೋಗ ಬಾಧೆ : ಸಂಸದರಿಗೆ ಕ್ಯಾಂಪ್ಕೊ ಮನವಿ
ಮಂಗಳೂರು ಫೆ 26, 2021: ಅಡಿಕೆ ಕೃಷಿಯನ್ನು ವ್ಯಾಪಕವಾಗಿ ಬಾಧಿಸಿರುವ ಹಳದಿ ರೋಗವು ಅಡಿಕೆ ಕೃಷಿಕರನ್ನು ಚಿಂತೆಗೀಡುಮಾಡಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆಯುವ ಸಲುವಾಗಿ ದ.ಕ. ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಕ್ಯಾಂಪ್ಕೊ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಮಂಗಳೂರಿನಲ್ಲಿ ಕ್ಯಾಂಪ್ಕೊ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿಯವರ ನೇತೃತ್ವದಲ್ಲಿ ಸಂಸದರನ್ನು ಭೇಟಿ ಮಾಡಿದ ಕ್ಯಾಂಪ್ಕೊ ನಿಯೋಗ ಅಡಿಕೆ ಕೃಷಿಕರ ಆದಾಯದ ಮೂಲಕ್ಕೆ ಹೊಡೆತ ನೀಡಿದ್ದು, ರೋಗ ನಿವಾರಣೆಗಾಗಿ ತಜ್ಞ ವಿಜ್ಞಾನಿಗಳ ತಂಡದ ಮೂಲಕ ಸಂಶೋಧನೆಗಳನ್ನು ನಡೆಸಿ ಶಾಶ್ವತ ಪರಿಹಾರವನ್ನು ಸೂಚಿಸುವುದು, ರೋಗಬಾಧೆಯಿಂದ ನೊಂದಿರುವ ಅಡಿಕೆ ಕೃಷಿಕರ ಸಾಲಮನ್ನಾ ಮಾಡುವುದು, ಹೊಸ ಕೃಷಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ಸಹಕಾರ ನೀಡುವ ಬಗ್ಗೆ ಸರಕಾರವನ್ನು ಒತ್ತಾಯಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ, ಪ್ರಮುಖವಾಗಿ ಸುಳ್ಯ, ಕೊಪ್ಪ, ಮಡಿಕೇರಿ ಮತ್ತು ಶೃಂಗೇರಿ ತಾಲೂಕುಗಳ ಅಡಿಕೆ ತೋಟಗಳನ್ನು ತೀವ್ರವಾಗಿ ಬಾಧಿಸಿರುವ ಹಳದಿ ರೋಗವು ಬೆಳೆಗಾರರಲ್ಲಿ ಆತಂಕವನ್ನುಂಟುಮಾಡಿದ್ದು ಅಡಿಕೆ ತೋಟಗಳನ್ನೇ ನುಂಗಿಹಾಕುವ ಸಂದೇಹವು ತಾಲೂಕಿನ ಕೃಷಿಕರನ್ನಾವರಿಸಿದೆ. ಈ ಬಗ್ಗೆ ಕೃಷಿಕರ ಮೇಲಿನ ಕಾಳಜಿಯಿಂದ ಕ್ಯಾಂಪ್ಕೊ ನಿ., ಮಂಗಳೂರು ಮತ್ತು ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆ, ಸುಳ್ಯ ಇವರ ಸಹಯೋಗದಲ್ಲಿ ಸುಳ್ಯದ ತೊಡಿಕಾನದಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಕೈಗೊಂಡ ನಿರ್ಣಯದಂತೆ ಮನವಿಯನ್ನು ಸಲ್ಲಿಸಲಾಗಿದೆ.
ಇದಲ್ಲದೆ, ಪದೇ ಪದೇ ಕೃಷಿಕರ ನಿದ್ದೆಗೆಡಿಸುವ ಅಡಿಕೆಯ ಮೇಲಿನ ನಿಷೇಧದ ತೂಗುಕತ್ತಿಯನ್ನು ನಿವಾರಿಸುವ ಸಲುವಾಗಿಯೂ ವೈಜ್ಞಾನಿಕ ಸಂಶೋಧನೆಗಳ ಅಗತ್ಯವಿರುವುದನ್ನು ಸಂಸದರ ಗಮನಕ್ಕೆ ತರಲಾಯಿತು.
ಕ್ಯಾಂಪ್ಕೊ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಮಹೇಶ್ ಚೌಟ, ರಾಘವೇಂದ್ರ ಭಟ್ ನಿಯೋಗದಲ್ಲಿ ಉಪಸ್ಥಿತರಿದ್ದರು.