ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನೆ: ಪೇಜಾವರ ಶ್ರೀ ಖಂಡನೆ
ಉಡುಪಿ, ಫೆ 23, 2021: ಪೊಗರು ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದನ್ನು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಖಂಡಿಸಿದ್ದಾರೆ .
ಚಿತ್ರದಲ್ಲಿ ಬ್ರಾಹ್ಮಣರನ್ನು ಅವಮಾನಿಸಲಾಗಿದ್ದು ಇದರಿಂದ ಬ್ರಾಹ್ಮಣರ ಭಾವನೆಗಳಿಗೆ ನೋವಾಗಿದೆ . ಕೇವಲ ಬ್ರಾಹ್ಮಣನ್ನು ಮಾತ್ರವಲ್ಲ ಯಾವುದೇ ಜಾತಿ ಸಮುದಾಯಗಳನ್ನು ನಿಂದಿಸುವ ಅವಮಾನಿಸುವ ಪ್ರವೃತ್ತಿ ಸಲ್ಲದು . ತಕ್ಷಣ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮಾಜವನ್ನು ನಿಂದಿಸುವ ದೃಶ್ಯಗಳನ್ನು ತೆರವುಗೊಳಿಸಬೇಕು ಎಂದು ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಅನೇಕ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಅರ್ಪಿಸುವ ಸಂದರ್ಭ ಶ್ರೀಗಳು ಅಲ್ಲಿದ್ದ ಬ್ರಾಹ್ಮಣ ಸಮಾಜದ ಮುಖಂಡರ ಮೊಬೈಲ್ ಮೂಲಕ ಚಲನಚಿತ್ರ ಮಂಡಳಿಯ ಪ್ರಮುಖರೊಂದಿಗೆ ಮಾತನಾಡಿ ಖಂಡನೆಯನ್ನು ವ್ಯಕ್ತಪಡಿಸಿ ಕೂಡಲೇ ವಿವಾದಿತ ದೃಶ್ಯಗಳ ಕತ್ತರಿಗೆ ಒತ್ತಾಯಿಸಿದ್ದಾರೆ.