ವಿದ್ಯುತ್ ದರ ಹೆಚ್ಚಳದ ಪ್ರಸ್ತಾಪಕ್ಕೆ ವಿರೋಧ: ಸಿಪಿಐ.ಎಂ ಬೆಳ್ತಂಗಡಿ ತಾಲೂಕು ಸಮಿತಿ
ಮಂಗಳೂರು, ಫೆಬ್ರವರಿ 20, 2021: ಆರ್ಥಿಕ ವರ್ಷದಲ್ಲಿ ಮೆಸ್ಕಾಂಗೆ 943.26 ಕೋಟಿ ರೂ ಆದಾಯದ ಕೊರತೆ ನಿಭಾಯಿಸುವ ಉದ್ದೇಶದಿಂದ ವಿದ್ಯುತ್ ಪ್ರತಿ ಯೂನಿಟ್ ಗೆ ಸರಾಸರಿ 1.67 ರೂ ಸುಂಕ ಹೆಚ್ಚಿಸುವ ಪ್ರಸ್ತಾಪಕ್ಕೆ ಸಿ.ಪಿ.ಐ.ಎಂ ಬೆಳ್ತಂಗಡಿ ತಾಲೂಕು ಸಮಿತಿ ವಿರೋಧ ವ್ಯಕ್ತಪಡಿಸಿದೆ ಮತ್ತು ಈ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣಾ ಸಭೆಯಲ್ಲಿ ಈ ಪ್ರಸಾಪವನ್ನು ಮಂಡಿಸಿ ಈ ಪ್ರಸ್ತಾಪಕ್ಕೆ ಈಗಾಗಲೇ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ನವಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಕಂಪೆನಿಗಳು ವಿದ್ಯುತ್ ದರವನ್ನು ಶೇ 5.4 ರಂತೆ ಸರಾಸರಿ 40 ಪೈಸೆ ಏರಿಕೆ ಮಾಡಿ ಈಗ ಮೂರು ತಿಂಗಳ ಅವಧಿಯಲ್ಲಿ ಮತ್ತೆ ಏರಿಕೆ ಮಾಡುತ್ತಿರುವುದು ಖಂಡನೀಯ. ಕೋರೋನಾ ಕಾಲದ ಈ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾದ್ಯವಿಲ್ಲ ಎಂದು ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ ಹೇಳಿದ್ದಾರೆ.
ಈಗಾಗಲೇ ಉದ್ಯೋಗ ನಷ್ಟ, ಆರ್ಥಿಕ ಕುಸಿತ, ಪೆಟ್ರೋಲ್ ದರ ಏರಿಕೆ, ಗ್ಯಾಸ್ ದರ ಏರಿಕೆ ಮತ್ತು ಸಬ್ಸಿಡಿ ಕಡಿತಗಳು ಜನ ಸಾಮಾನ್ಯರ ಬದುಕಿನ ಮೇಲೆ ದೊಡ್ಡ ಹೊಡೆತ ನೀಡಿದೆ. ಇನ್ನು ಸಣ್ಣ ಪುಟ್ಟ ಕೈಗಾರಿಕೆಗಳು ಮತ್ತು ಉದ್ದಿಮೆಗಳು ಆರ್ಥಿಕ ಸಂಕಷ್ಟದಲ್ಲಿ ಬಹುತೇಕ ನಷ್ಟದಲ್ಲಿವೆ ಮತ್ತು ಹಲವು ಕೈಗಾರಿಕೆಗಳು ಮುಚ್ಚಿವೆ. ಇಂತಹ ಸಂದರ್ಭದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯ ಹೊರೆಯು ಇದು ಗಾಯದ ಮೇಲೆ ಬರೆ ಎಳೆದಂತೆ ಎಂದಿದ್ದಾರೆ.
ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆಯನ್ನು ಮಾಡದೆ ಈ ಪ್ರಸ್ತಾಪವನ್ನು ಮೆಸ್ಕಾಂ ಕಂಪನಿ ಕೂಡಲೇ ಕೈಬಿಡಬೇಕೆಂದು ಸಿ.ಪಿ.ಐ.ಎಂ ಬೆಳ್ತಂಗಡಿ ತಾಲೂಕು ಸಮಿತಿ ಒತ್ತಾಯಿಸುತ್ತದೆ ಎಂದು ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.