ತೋಟಗಾರಿಕೆ ಬೆಳೆಗಳನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಮಾಹಿತಿ
ಮಂಗಳೂರು, ಫೆಬ್ರವರಿ 10, 2021: ಮಂಗಳೂರು ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಬೆಳೆಗಳನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಹಾಗೂ ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಂಡು ಉತ್ತಮ ಫಸಲನ್ನು ಪಡೆಯಲು ತೋಟಗಾರಿಕೆ ಬೆಳೆಗಾರರು ಅನುಸರಿಸಬೇಕಾಗಿರುವ ಅಗತ್ಯ ಕ್ರಮಗಳ ವಿವರ ಇಂತಿವೆ.
ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಅಳವಡಿಸುವುದರಿಂದ ಗಿಡಗಳಿಗೆ ಅವಶ್ಯವಿರುವಷ್ಟು ಪ್ರಮಾಣದಲ್ಲಿ ನೀರನ್ನು ಒದಗಿಸಬಹುದು,
ಬೇರಿನ ವಲಯಗಳಿಗೆ ನೇರವಾಗಿ ನೀರನ್ನು ಒದಗಿಸುವುದರಿಂದ ನೀರು ಪೋಲಾಗುವುದನ್ನು ತಡೆಗಟ್ಟಬಹುದು ಹಾಗೂ ಮಿತ ಬಳಕೆಯಿಂದ ಅಧಿಕ ಇಳುವರಿಯನ್ನು ಪಡೆಯಬಹುದು.
ಹೊದಿಕೆ ಹಾಕುವುದರಿಂದ(ಮಲ್ಚಿಂಗ್) ತೋಟಗಳಲ್ಲಿ ಗಿಡದ ಅಥವಾ ಮರದ ಬುಡದ ಸುತ್ತಲೂ ಸಾಮಾನ್ಯವಾಗಿ ದೊರೆಯುವಂತಹ ತೆಂಗು/ಅಡಿಕೆಯ ಒಣಗಿದ ಸೋಗೆಗಳು ಹಾಗೂ ಅಡಿಕೆ ಸಿಪ್ಪೆಯನ್ನ್ಪು ಬಳಸಿ ಮಲ್ಚಿಂಗ್(ಹೊದಿಕೆ) ಮಾಡುವುದರಿಂದ ಸೂರ್ಯನ ಕಿರಣಗಳಿಂದ ನೀರಿನ ಆವಿಯಾಗುವಿಕೆಯನ್ನು ತಡೆಗಟ್ಟಿ ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಅನುಕೂಲವಾಗುತ್ತದೆ.
ಸಾವಯವ ಗೊಬ್ಬರಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಅಧಿಕವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ತೋಟಗಾರಿಕೆಯಲ್ಲಿ ಬಳಸುವುದು ಉತ್ತಮವಾಗಿರುತ್ತದೆ.
ಮಳೆ ನೀರು ಕೊಯ್ಲು ವಿಧಾನವನ್ನು ಮಳೆ ನೀರು ಶೇಖರಣೆಗಾಗಿ ಕೃಷಿಹೊಂಡ/ನೀರು ಸಂಗ್ರಹಣಾ ಘಟಕಗಳನ್ನು ನಿರ್ಮಿಸಿಕೊಂಡು ಮಣ್ಣಿನಲ್ಲಿ ತೇವಾಂಶ ಕಡಿಮೆಯಾದಾಗ ತೋಟದ ಬೆಳೆಗಳಿಗೆ ನೀರನ್ನು ಉಪಯೋಗಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಿಶಲ್ ಡಿಸೋಜ, ತೋಟಗಾರಿಕೆ ವಿಷಯತಜ್ಞರು, ಮಂಗಳೂರು ದೂರವಾಣಿ ಸಂಖ್ಯೆ: 8277806372 ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.