ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಣೆ
ಮಂಗಳೂರು, ಜನವರಿ 09, 2021: ಸರ್ಕಾರದ ಸೂಚನೆಯಂತೆ ಮೊದಲ ಹಂತದಲ್ಲಿ
ಇ-ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳ 1 ರಿಂದ 10 ತಾರೀಕಿನವರೆಗೆ ನೀಡಬಹುದಾಗಿದೆ.
ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ನೀಡಬೇಕಾಗಿದ್ದು, ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್.ಪಿ.ಜಿ.ವಿವರ, ಮೊಬೈಲ್ ಸಂಖ್ಯೆಗಳನ್ನು ನೀಡಬೇಕು.
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್.ಪಿ.ಜಿ ದಾಖಲೆ, ಜಾತಿ ಪ್ರಮಾಣ ಪತ್ರ (ಇದ್ದಲ್ಲಿ), ಆದಾಯ ಪ್ರಮಾಣ ಪತ್ರ ಮುಂತಾದ ದಾಖಲೆಗಳೊಂದಿಗೆ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಲು ತಿಳಿಸಿದೆ.
2020ರ ಫೆಬ್ರವರಿ ನಂತರ ವಿತರಿಸಿರುವ ಹೊಸ ಹಾಗೂ ಜಿ.ಎಸ್.ಸಿ(ತಿದ್ದುಪಡಿ) ಮಾಡಲಾದ ಪಡಿತರ ಚೀಟಿಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ ಹಾಗೂ ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡಲೇ ಬೇಕಾಗಿರುತ್ತದೆ.
ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರು ಮತ್ತು ಸಹಾಯಕ ನಿರ್ದೇಶಕರು ಅನೌಪಚಾರಿಕ ಪಡಿತರ ಪ್ರದೇಶ ಮಂಗಳೂರು ಇವರ ಕಛೇರಿಯನ್ನು ಸಂಪರ್ಕಿಸಲು ದ.ಕ ಜಿಲ್ಲಾಧಿಕಾರಿಗಳು ಕಛೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.