ಮಂಗನ ಖಾಯಿಲೆ ನಿವಾರಣೆಗೆ ಜಿಲ್ಲೆಯಲ್ಲಿ ರಿಸರ್ಚ್ ಸೆಂಟರ್ ಅಗತ್ಯ
ಕಾರವಾರ ಫೆ. 8, 2021: ಮಂಗನ ಖಾಯಿಲೆಯ ಸಮಗ್ರ ಶೋಧನೆಗಾಗಿ ಜಿಲ್ಲೆಯಲ್ಲಿ ‘ರಿಸರ್ಚ್ ಸೆಂಟರ್’ ತೆರೆದು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಆತ್ಮ ವಿಶ್ವಾಸ ತುಂಬಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ಕುಮಾರ್ ಕೆ., ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ 2020-21 ನೇ ಸಾಲಿನ ಮಂಗನ ಖಾಯಿಲೆ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳ ಕುರಿತು ಸೋಮವರ ನಡೆದ ‘ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2019ರ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಂಗನ ಖಾಯಿಲೆ ಪ್ರಭಾವ ಹೆಚ್ಚಿತ್ತು. ಆದರೆ 2020ರಲ್ಲಿ ಆ ಪ್ರಬಾವವಿಲ್ಲ. ಆದರೂ ಈ ಬಾರಿ ಖಾಯಿಲೆ ನಿಯಂತ್ರಣದ ಕುರಿತು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹೆಚ್ಚು ಗಮನಹರಿಸಬೇಕಿದೆ. ಮಂಗನ ಖಾಯಿಲೆ ದೃಢತೆಗಾಗಿ ಸಂಭಂದಿಸಿದ ವ್ಯಕ್ತಿಯ ರಕ್ತದ ಮಾದರಿ ತಪಾಸಣೆಗಾಗಿ ಪಕ್ಕದ ಶಿವಮೊಗ್ಗ ಜಿಲ್ಲೆ ಅಥವಾ ಬೆಂಗಳೂರಿಗೆ ತೆರಳಬೇಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಗನ ಖಾಯಿಲೆ ಕುರಿತು ಜಿಲ್ಲೆಯಲ್ಲಿಯೇ ಒಂದು ರಿಸರ್ಚ್ ಸೆಂಟರ್ ತೆರೆದು ರಕ್ತದ ಮಾದರಿ ಪರಿಶೀಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹೊನ್ನಾವರದ ಕೆಎಫ್ಡಿ ವೈದ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ 2020ರಲ್ಲಿ 91 ಪಾಸಿಟಿವ್ ಕೇಸ್ಗಳು ಬಂದಿದ್ದು, ಒಂದು ಸಾವು ಸಂಭವಿಸಿದೆ. ಖಾಯಿಲೆ ನಿವಾರಣೆಗಾಗಿ ಮೂರು ಹಂತದಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ ಜನರು ಮೊದಲ ಹಂತದ ವ್ಯಾಕ್ಸಿನ್ ತೆಗೆದುಕೊಂಡು ನಂತರ ಎರಡನೇ ಹಂತದ ವ್ಯಾಕ್ಸಿನ್ ಪಡೆಯಲು ನಿರಾಕರಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಎಸ್. ಬದ್ರಿನಾಥ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರೇಮ್ಕುಮಾರ್ ನಾಯ್ಕ್, ಜಿಲ್ಲಾ ಆರ್ಹೆಚ್ಸಿ ಅಧಿಕಾರಿ ಡಾ. ರಮೇಶ್ರಾವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಿನೋದ ಭುತೇ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ಗೋರೆಸಾಬ ನದಾಫ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.