ಗೇರು ಬೆಳೆಯಲ್ಲಿ ಟೀ ಸೊಳ್ಳೆ ಕೀಟ ನಿಯಂತ್ರಣ ಕ್ರಮಗಳು
ಉಡುಪಿ, ಫೆ 6, 2021: ಗೋಡಂಬಿ (ಗೇರು) ವಿದೇಶಿ ವಿನಿಮಯ ಗಳಿಸುತ್ತಿರುವ ಮುಖ್ಯವಾದ ಬೆಳೆಗಳಲ್ಲಿ ಒಂದಾಗಿದ್ದು, ಜಿಲ್ಲೆಯಲ್ಲಿ ಸಾವಿರಾರು ಮಂದಿ ರೈತರು ಈ ಬೆಳೆಯನ್ನೇ ನೆಚ್ಚಿಕೊಂಡು ವಾರ್ಷಿಕ ಆದಾಯವನ್ನು ಗಳಿಸುತ್ತಾರೆ.
ಜಿಲ್ಲೆಯಲ್ಲಿ ಅಂದಾಜು 15,000 ಬೆಳೆಗಾರರು 17,582 ಹೆಕ್ಟೇರ್ನಲ್ಲಿ ಗೇರು ಬೆಳೆಯುತ್ತಿದ್ದಾರೆ.
ಜನವರಿ-ಫೆಬ್ರವರಿ ತಿಂಗಳಿನಲ್ಲಿ ತಡವಾಗಿ ಕೊಯ್ಲಿಗೆ ಬರುವ ತಳಿಗಳು, ಮೋಡ ಕವಿದ ವಾತಾವರಣದಲ್ಲಿ ಟೀ-ಸೊಳ್ಳೆ ಕಾಟಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ.
ಗೇರು ಬೆಳೆಗೆ ಟೀ ಸೊಳ್ಳೆ ದೊಡ್ಡ ವೈರಿಯಾಗಿ ಕಾಡುತ್ತಿದ್ದು, ಎಲೆ, ಹೂ, ಹಣ್ಣು ಮತ್ತು ಬೀಜಗಳಿಂದ ರಸ ಹೀರುತ್ತವೆ. ಇದರಿಂದ ಎಲೆಗಳು ಮುರುಟಾಗುವುದು, ರೆಂಬೆಗಳು ಮತ್ತು ಹೂಗಳು ಒಣಗುತ್ತವೆ. ಬೀಜಗಳು ಮುರುಟಾಗಿ, ಅವುಗಳ ಮೇಲೆ ಕಜ್ಜಿಯಂತಹ ಚುಕ್ಕೆಗಳಾಗುತ್ತವೆ.
ಈ ಕೀಟದ ನಿರ್ವಹಣೆಗಾಗಿ ಮೊದಲ ಸಿಂಪರಣೆ ಚಿಗುರು ಬರುವಾಗ ಮೊನೊ ಕ್ರೊಟೋಫಾಸ್ 1.5 ಮಿ.ಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎರಡನೇ ಸಿಂಪರಣೆ ಹೂ ಬಿಡುವಾಗ ಲ್ಯಾಂಬ್ಡ ಸೈಹ್ಯಾಲೋತ್ರಿನ್ 1.5 ಮಿ.ಲೀ. ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮೂರನೇ ಸಿಂಪರಣೆ ಬೀಜ ಮತ್ತು ಕಾಯಿ ಬಿಡುವಾಗ ಕ್ವಿನಾಲ್ಫಾಸ್ 2 ಮಿ.ಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಉಡುಪಿ ದೂ.ಸಂಖ್ಯೆ: 0820-2520590/ 8971037181 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.