ಕಾರವಾರ ಕಡಲತೀರ ಕಾಂಪೌಂಡ್ ನಿರ್ಮಾಣ: ಸ್ಪಷ್ಟೀಕರಣ ನೀಡಿದ ಪ್ರವಾಸೋದ್ಯಮ ಇಲಾಖೆ
ಕಾರವಾರ ಡಿ. 29, 2020: ನಗರದ ರವೀಂದ್ರನಾಥ ಠಾಗೋರ್ ಕಡಲ ತೀರಕ್ಕೆ ಕಾಂಪೌಂಡ್ ನಿರ್ಮಾಣ ಮಾಡುವ ಕಾಮಗಾರಿಗೆ ಸಮಬಂಧಿಸಿದಂತೆ ಬೀಚ್ನ ಸೊಬಗನ್ನು ಸವಿಯಲು ತಡೆಗೋಡೆ ತೊಂದರೆಯಾಗುತ್ತದೆ ಎಂದು ಅನೇಕ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಎಸ್.ಪುರುಷೋತ್ತಮ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಕಾರವಾರ ನಗರದ ಮೂಲಕ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಈ ಹಿಂದೆ ಬೀಚ್ ಗೆ ಇದ್ದ ಕಮಾನನ್ನು ತೆರವುಗೊಳಿಸಲಾಗಿದ್ದು, ಈ ಸಂಬಂಧ ಪರಿಹಾರ ಹಣ ಜಿಲ್ಲಾಧಿಕಾರಿಯವರ ಪಿ.ಡಿ ಖಾತೆಗೆ ಜಮೆಯಾಗಿರುತ್ತದೆ.
ಅದರಂತೆ ನವಂಬರ್ 24 ರಂದು ಎರಡು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗಿರುತ್ತದೆ. ಮೊದಲನೆಯದಾಗಿ ರೂ. 32.60 ಲಕ್ಷ ವೆಚ್ಚದಲ್ಲಿ ಬೀಚ್ಗೆ ಸ್ವಾಗತ ಕಮಾನು ಹಾಗೂ ರವೀಂದ್ರನಾಥ ಠಾಗೋರರ ಪುತ್ತಳಿ ಹಾಗೂ ಇಂಟರ್ ಲಾಕ್ ಕಾಮಗಾರಿ. ಎರಡನೆಯದಾಗಿ ರೂ. 30 ಲಕ್ಷ ವೆಚ್ಚದಲ್ಲಿ ಸ್ವಾಗತ ಕಮಾನಿನಿಂದ ವಾರ್ಷಿಪ್ ಮ್ಯೂಸಿಯಂ ವರೆಗೆ ಕಾಂಪೌಂಡ್ ನಿರ್ಮಾಣ ಈ ಎರಡೂ ಕಾಮಗಾರಿಗಳನ್ನು ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಕೈಗೊಳ್ಳಲಾಗಿದೆ.
“ಯಾವುದೇ ರೀತಿಯಲ್ಲೂ ಬೀಚ್ನ ನೈಸರ್ಗಿಕ ಸೌಂದರ್ಯ ಹಾಳು ಮಾಡದಂತೆ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದ್ದು, ನೆಲಹಂತದವರೆಗೆ ತಳಪಾಯವನ್ನು ಹಾಕಲಾಗುತ್ತದೆ. ತಳಪಾಯದ ಮೇಲೆ ಜಿ.ಐ. ಸಲಾಕೆಗಳಿಂದ ಮಾಡಿದ ಗ್ರಿಲ್ ಅನ್ನು ಅಳವಡಿಸಲಾಗುವುದು. ಈ ಗ್ರಿಲ್ಸ್ ನ ಎತ್ತರ 4.5 ಅಡಿ ಇರುತ್ತದೆ. ಗ್ರಿಲ್ಸ್ ಅನ್ನು ತಳಪಾಯದ ಮೇಲೆ ಅಳವಡಿಸಲಾಗುವುದು. ಯಾವುದೇ ರೀತಿಯಲ್ಲೂ ಬೀಚ್ ಕಾಣದಂತೆ ಸಂಪೂರ್ಣವಾಗಿ ತಡೆಗೋಡೆ ನಿರ್ಮಾಣವಾಗುತ್ತಿಲ್ಲ. ಬದಲಾಗಿ ಛಾಯಾಚಿತ್ರದಲ್ಲಿರುವ ಮಾದರಿಯಲ್ಲಿ ಕಾಂಪೌಂಡ್ ಅನ್ನು ನಿರ್ಮಾಣ ಮಾಡಲಾಗುವುದು,” ಎಂದು ಪ್ರವಾಷೋದ್ಯಮ ಇಲಾಖೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.