ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಚ್ಚರಿಕೆ
ಕಾರವಾರ, ಡಿಸೆಂಬರ್ 10, 2020: ವಿವಿಧ ಇಲಾಖೆ ಕಚೇರಿ ಹಾಗೂ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಮಯ ಪಾಲನೆಯ ಅರಿವು ಮೂಡಿಸಲು, ಚಲನ-ವಲನ ವಹಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಅವರು ಸೂಚಿಸಿದ್ದಾರೆ.
ಈ ಕುರಿತು ಎಲ್ಲ ಇಲಾಖೆಗಳಿಗೆ ಅದಿಕೃತ ಆದೇಶ ಹೊರಡಿಸಿರುವ ಅವರು, ತಮ್ಮ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ವಿವಿಧ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿದಾಗ, ಸರಕಾರ ನಿಗದಿಪಡಿಸಿದ ಸಮಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿಯಲ್ಲಿ ಕರ್ತವ್ಯಕ್ಕೆ ಲಭ್ಯವಿರುವುದಿಲ್ಲ. ಒಂದುವೇಳೆ ಕಚೇರಿಗೆ ಅವರು ಬಂದರೂ ಸಹ ಹರಟೆ ಹೊಡೆದು ಕಾಲ ಹರಣ ಮಾಡುತ್ತಿರುತ್ತಾರೆ. ಊಟದ ಸಮಯ ಸೇರಿದಂತೆ ಇತರ ಸಂದರ್ಭಗಳಲ್ಲಿ ಕ್ಯಾಂಟಿನ್ನಲ್ಲಿ ಸಮಯ ವ್ಯರ್ಥ ಮಾಡುತ್ತಿರುತ್ತಾರೆ ಎಂಬ ದೂರುಗಳು ಜಿಲ್ಲಾಡಳಿತಕ್ಕೆ ಬಂದಿರುವದರಿಂದ ಎಲ್ಲ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕೆಂದು ಅವರು ತಮ್ಮ ಆದೇಶದ ಮೂಲಕ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಅಲ್ಲದೇ ಕಚೇರಿಯ ಮುಖ್ಯಸ್ಥರ ಪರವಾನಗಿ ಇಲ್ಲದೇ ಅಧೀನ ಸಿಬ್ಬಂದಿ ಮೇಲಾಧಿಕಾರಿಗಳ ಕಚೇರಿಗೆ ಭೇಟಿ ನೀಡುತ್ತಿರುವುದು ಕೂಡ ಗಮನಕ್ಕೆ ಬಂದಿರುವುದನ್ನು ಮನಗಂಡು, ಈ ರೀತಿಯ ವರ್ತನೆ ನೌಕರರಿಗೆ ಹಾಗೂ ಕಚೇರಿಗೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.
ಕರ್ತವ್ಯದ ವೇಳೆ ಸಮಯ ವ್ಯರ್ಥ ಮಾಡುವುದು ಮತ್ತು ಪರವಾನಗಿ ಪತ್ರವಿಲ್ಲದೇ ಅಧೀನ ಕಚೇರಿ ಸಿಬ್ಬಂದಿ ಮೇಲಾಧಿಕಾರಿ ಕಚೇರಿಗೆ ಭೇಟಿ ನೀಡಿದಲ್ಲಿ, ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಅಂತವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಜೊತೆಗೆ ಅಧೀನ ಕಚೇರಿಯ ಸಿಬ್ಬಂದಿ ಪದೇ ಪದೇ ಜಿಲ್ಲಾಧಿಕಾರಿ ಕಚೇರಿಗೆ ಬಂದಲ್ಲಿ ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೋಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರಕಾರ ನಿಗದಿಪಡಿಸಿದ ಸಮಯ ಪಾಲನೆಯ ಜೊತೆಗೆ ಕರ್ತವ್ಯಕ್ಕೆ ಹಾಜರಾಗಿ ಕಚೇರಿ ಕೆಲಸ ನಿರ್ವಹಿಸುವಂತೆ ಆಯಾ ಇಲಾಖೆ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಸಿಬ್ಬಂದಿಗೆ ತಿಳಿಸಬೇಕು. ಕಚೇರಿಯಲ್ಲಿ ಬಯೋಮೇಟ್ರಿಕ್ ಕಡ್ಡಾಯಗೊಳಿಸಬೇಕು. ಅಲ್ಲದೇ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ದಿನದ 24 ಗಂಟೆ ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.