ವಿದ್ಯಾರ್ಥಿನಿಯರಿಗಾಗಿ ಮಹಿಳಾ ಹಾಸ್ಟೆಲ್ ಮಂಜೂರು ಮಾಡಿ: ಉಸ್ತುವಾರಿ ಸಚಿವರಿಗೆ ಶಾಸಕ ರಘುಪತಿ ಭಟ್ ಬೇಡಿಕೆ
ಉಡುಪಿ ಡಿ 03 2020: ಶೈಕ್ಷಣಿಕವಾಗಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟ ಜಿಲ್ಲೆಯಾಗಿದೆ. ಇಲ್ಲಿಗೆ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದಾರೆ. ಇವರಿಗೆ ಉಳಿದುಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿಗೆ ಮಹಿಳಾ ಹಾಸ್ಟೆಲ್ ಮಂಜೂರು ಮಾಡಿ ಎಂದು ಶಾಸಕ ರಘುಪತಿ ಭಟ್ ಅವರು ಗೃಹ ಸಚಿವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.
ಡಿಸೆಂಬರ್ 3 ರಂದು ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು, ಉಡುಪಿ ಇಲ್ಲಿನ ನೂತನ ಕಟ್ಟಡದ ಉದ್ಘಾಟನೆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮನವಿಯನ್ನು ಮಾಡಿದ ಶಾಸಕರು ಶಿಕ್ಷಣಕ್ಕಾಗಿ ಉಡುಪಿ ನಗರಕ್ಕೆ ಆಗಮಿಸುವ ವಿದ್ಯಾರ್ಥಿನಿಯರು ವಾಸ್ತವ್ಯಕ್ಕಾಗಿ ಪಿಜಿ ಅಥವಾ ಬಾಡಿಗೆ ಮನೆಯನ್ನು ಅವಲಂಬಿಸಿದ್ದು, ಇದು ಆರ್ಥಿಕವಾಗಿ ಅವರಿಗೆ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣದ ಅವಶ್ಯಕತೆ ಇದೆ ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಉಡುಪಿಯ ಕೊಡುಗೆ ಅಪಾರವಾಗಿದೆ. ಮಾನ್ಯ ಶಾಸಕರ ಬೇಡಿಕೆಯಂತೆ ಮಹಿಳಾ ಹಾಸ್ಟೆಲ್ ಮಂಜೂರು ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವ ಭರವಸೆ ನೀಡಿದರು.
ಕಾಪು ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನಕರ್ ಬಾಬು, ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಆರ್. ನಾಯಕ್, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸಂಧ್ಯಾ ಕಾಮತ್, ಸ್ಥಳೀಯ ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣ ಪ್ರಾಂಶುಪಾಲರಾದ ರುದ್ರ ಗೌಡ ಎಸ್, ಮತ್ತು ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ, ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.