ಪಶ್ಚಿಮ ಪದವೀಧರರ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ
ಕಾರವಾರ, ನ 27, 2025: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ-2026 ರ ಸಂಬಂಧ ಮತದಾರರ ಪಟ್ಟಿಯ ಅರ್ಹತಾ ದಿನಾಂಕ 01-11-2025 ಕ್ಕೆ ಸಂಬಂಧಿಸಿದಂತೆ ನವೆಂಬರ್ 25 ರಂದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ತಾಲೂಕಿನ ತಹಶೀಲ್ದಾರ ಕಚೇರಿಗಳಲ್ಲಿ, ತಾಲೂಕ ಪಂಚಾಯತ ಕಚೇರಿಗಳಲ್ಲಿ, ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಸದರಿ ಮತದಾರರ ಪಟ್ಟಿಯಲ್ಲಿ 7128 ಪುರುಷರು ಮತ್ತು 7103 ಮಹಿಳೆಯರು ಹೀಗೆ ಒಟ್ಟು 14231 ಮತದಾರರು ಇರುತ್ತಾರೆ. ಮತದಾರರು ತಮ್ಮ ಹೆಸರು ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳುವುದು ಮತ್ತು ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಅರ್ಹ ಪದವೀಧರರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 10-12-2025 ರವರೆಗೆ ಕಾಲಾವಕಾಶವಿರುತ್ತದೆ.
ಅರ್ಹ ಪ್ರತಿಯೊಬ್ಬ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಮತ್ತು ಕರಡು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೆ ಆಕ್ಷೇಪಣೆ/ ಹೆಸರನ್ನು ತೆಗೆದು ಹಾಕಲು ಹಾಗೂ ಕರಡು ಮತದಾರರ ಪಟ್ಟಿಯಲ್ಲಿ ನಮೂದುಗಳ ತಿದ್ದುಪಡಿಗಳಿಗಾಗಿ ಮತದಾರ ನೋಂದಣಿ ನಿಯಮಗಳು 1960 ರ ಪ್ರಕಾರ ಸೂಕ್ತವಾಗಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಸಂಬಂಧಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳು & ತಹಶೀಲ್ದಾರ ಕಚೇರಿಯಲ್ಲಿ ಹಾಗೂ ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
