ಶ್ರೀ ಕೃಷ್ಣಜನ್ಮಾಷ್ಟಮೀ, ದುರ್ಗಾಜನ್ಮಾಷ್ಟಮೀ ಬಗ್ಗೆ ಅರ್ಥಪೂರ್ಣ ಮಾಹಿತಿ
ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ
ಅನುವಂಶಿಕ ಅರ್ಚಕರು
ಶ್ರೀಕ್ಷೇತ್ರಕಟೀಲು
ಇಂದು ಕೃಷ್ಣಜನ್ಮಾಷ್ಟಮೀ. ಎಲ್ಲರಿಗೂ ತಿಳಿದ ವಿಚಾರ. ಇಂದು ದುರ್ಗಾಜನ್ಮಾಷ್ಟಮೀ ಎನ್ನುವುದು ಎಷ್ಟು ಜನರಿಗೆ ತಿಳಿದಿದೆ ಹೇಳಿ? ಇಲ್ಲವಲ್ಲ. ಅದಕ್ಕಾಗಿ ಈ ವಿವರ.
ವೈವಸ್ವತೇಂತರೇ ಪ್ರಾಪ್ತೇ ಅಷ್ಟಾವಿಂಶತಿಮೇ ಯುಗೇ|
ಶುಂಭೋ ನಿಶುಂಭಶ್ಚೈವಾನ್ಯಾವುತ್ಪತ್ಸ್ಯೇತೇ ಮಹಾಸುರೌ ||
ನಂದಗೋಪಗೃಹೇ ಜಾತಾ ಯಶೋದಾಗರ್ಭಸಂಭವಾ |
ತತಸ್ಥೌ ನಾಶಯಿಷ್ಯಾಮಿ ವಿಂಧ್ಯಾಚಲನಿವಾಸಿನೀ||
(ಇಪ್ಪತ್ತೆಂಟನೆಯ ವೈವಸ್ವತಮನ್ವಂತರದ ಕಲಿಯುಗದಲ್ಲಿ ಇದೇ ಶುಂಭನಿಶುಂಭರೆಂಬ ಮಹಾಸುರರು ಮತ್ತೊಮ್ಮೆ ಹುಟ್ಟಲಿದ್ದಾರೆ. ನಂದಗೋಪನ ಮನೆಯಲ್ಲಿ ಯಶೋದೆಯ ಗರ್ಭದಲ್ಲಿ ಉಂಟಾದವಳಾಗಿ ಹುಟ್ಟಿ ಅವರನ್ನು ವಿಂಧ್ಯಾಚಲನಿವಾಸಿನಿಯಾಗಿ ಕೊಲ್ಲುತ್ತೇನೆ)
ಅಂತಹ ದೇವಿಯೂ ಕೃಷ್ಣ ಹುಟ್ಟಿದ ದಿನದಂದೇ ಹುಟ್ಟಿದಳು. ಕಂಸನಿಗೆ ನಿನ್ನ ಮೃತ್ಯುವಾಗಿ ಅವತಾರವೆತ್ತಿದವ ಬೆಳೆಯುತ್ತಿದ್ದಾನೆ ಎನ್ನುತ್ತಾ ಕಂಸನಿಗೆ ಮತ್ತೊಮ್ಮೆ ಭಯಹುಟ್ಟಿಸಿ ಅಂತರ್ಧಾನಳಾಗುವ ಕಂಸಾರಿಸೋದರಿಯಾದ ಆ ದುರ್ಗೆಯ ಜನ್ಮದಿನವೂ ಇಂದೇ. ಇವಳೇ ಅರುಣಾಸುರಸಂಹಾರಿಣಿಯಾಗುವಾಗ ಭ್ರಾಮರಿಯಾದವಳು. ನಂತರ ನಂದಿನಿಯ ಕಟಿಪ್ರದೇಶದಲ್ಲಿ ಜನಿಸಿದವಳು. ಹಾಗಾಗಿ ಶ್ರೀಕ್ಷೇತ್ರ ಕಟೀಲಿನಲ್ಲಿ ಇಂದು ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನ ಮೃಣ್ಮಯ ವಿಗ್ರಹ ಪ್ರತಿಷ್ಟಾಪಿಸಿ ಪೂಜೆ ಮಾಡಿ ರಾತ್ರಿ ಕೃಷ್ಣನಿಗೂ ಚಂದ್ರನಿಗೂ ಅರ್ಘ್ಯಪ್ರದಾನ ನೆರವೇರಿಸಿ ನಾಳೆಯ ದಿನ ಮೊಸರುಕುಡಿಕೆ ನೆರವೇರಿಸಿ( ಈ ವರ್ಷ ಸಾಂಕೇತಿಕ ಮಾತ್ರ) ಆ ವಿಗ್ರಹವನ್ನು ವಿಸರ್ಜಿಸುವುದು ಸತ್ಮಂಪ್ರದಾಯ.
ಅದೇ ರೀತಿ ದೇವಿಯ ಜನ್ಮಾಷ್ಟಮಿಯ ದಿನ ದೇವಿಗೆ ಎರಡು ಭಾರಿ ಅಭಿಷೇಕ ನೆರವೇರಿಸಿ ಪುನರಪಿ ಹೊಸ ಹೂ ತುಳಸಿಗಳಿಂದ ದೇವಿಯನ್ನು ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಿ ನಾಳೆ ರಾತ್ರಿ ದೇವಿಗೆ ಅತ್ಯಂತ ಪ್ರೀತಿದಾಯಕವಾದ ಆಟದ ( ಯಕ್ಷಗಾನ) ಸೇವೆ ನೀಡುವುದೂ ಇಲ್ಲಿನ ಸಂಪ್ರದಾಯ. ನವರಾತ್ರಿ ಹೊರತುಪಡಿಸಿ ದೇವಿಗೆ ಎರಡು ಭಾರಿ ಅಭಿಷೇಕ ಈ ದಿನ ಮಾತ್ರ. ಮೇಳ ಒಳಗಾದ ಮೇಲೆ ಮೇಳದ ದೇವರಿಗೂ ಪೂಜೆ ಮಾಡಿ ಆಟ ನೆರವೇರುವುದೂ ನಾಳೆಯ ವಿಟ್ಲಪಿಂಡಿಯ ದಿನ ಮಾತ್ರ.
ಈ ದುರ್ಗಾ ಜನ್ಮಾಷ್ಟಮಿಯ ಪ್ರಯುಕ್ತ ಇಂದು ಸಂಜೆ ಮತ್ತೊಮ್ಮೆ ದೇವಿಗೆ ಅಭಿಷೇಕ ನೆರವೇರಿಸಿ ಮತ್ತೊಮ್ಮೆ ಸೀರೆ ಉಟ್ಟು ಮಾಡಲಾದ ಅಲಂಕಾರದ ಸೊಬಗನ್ನು ಕಂಡು ನಮ್ಮ ಕಣ್ಣನ್ನು ಪವಿತ್ರೀಕರಿಸೋಣ.