ಗಾಂಧಿ ಶಿಲ್ಪ ಬಜಾರ್ ಕರಕುಶಲ ಕಲೆಗಳ ಪ್ರದರ್ಶನಕ್ಕೆ ಚಾಲನೆ
ಮಂಗಳೂರು, ಜ.10, 2023: ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ ಹಾಗೂ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ದೇಶದ ವಿವಿಧ ರಾಜ್ಯಗಳ ಕರಕುಶಲ ಕರ್ಮಿಗಳ ಕರಕುಶಲ ಕಲೆಗಳ ಗಾಂಧಿ ಶಿಲ್ಪ ಬಜಾರ್ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಇಂದು ನಗರದ ವುಡ್‍ಲ್ಯಾಂಡ್ ಹೋಟೆಲ್‍ನ ಆವರಣದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಭಾರತ ದೇಶದಲ್ಲಿ ಪರಂಪರಾಗತವಾಗಿ ಬಂದಿರುವ ಕುಶಲಕರ್ಮಿ ವೃತ್ತಿಗಳು ಹಲವಿವೆ, ನಮ್ಮ ಪೂರ್ವಿಕರು ವಂಶಪಾರಂಪರ್ಯವಾಗಿ ಬೆಳೆಸಿಕೊಂಡು ಬಂದಿರುವ ಕರಕುಶಲ ವೃತ್ತಿಗಳು ಇಂದು ದೇಶದಿಂದ ದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಪರಿಚಯವಾಗಬೇಕೆಂಬ ದೃಷ್ಟಿಯಿಂದ ಈ ರೀತಿಯ ವಸ್ತು ಪ್ರದರ್ಶನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೊತೆಯಾಗಿ ಆಯೋಜಿಸಿವೆ, ಈ ಮೂಲಕ ಪ್ರಧಾನಮಂತ್ರಿಯವರ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯಡಿ ಇಂತಹ ವೃತ್ತಿ ಕೌಶಲಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಪರಿಚಯಿಸುವಂತಹ ಕಾರ್ಯ ಆಗುತ್ತಿದೆ. ನಾವಿಂದು ಜಿ20 ಕಾಲಘಟ್ಟದಲ್ಲಿದ್ದು, ಪ್ರಧಾನಮಂತ್ರಿಯವರು ಲೋಕಲ್ ಫಾರ್ ವೋಕಲ್ ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ಮೂಲಕ ಅವರು ಸ್ಥಳೀಯ ಪ್ರತಿಭೆಗಳ ನಿಪುಣತೆ ಮಾನ್ಯತೆ ನೀಡಿ, ಅವರ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸು ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್ ಮಾತನಾಡಿ, ದೇಶಾದ್ಯಂತ ವಿವಿಧ ರಾಜ್ಯಗಳ ನೂರು ಮಂದಿ ಕರಕುಶಲ ಕರ್ಮಿಗಳ ಮಳಿಗೆಗಳನ್ನು ಇಲ್ಲಿ ಹಾಕಲಾಗಿದೆ, ಅವುಗಳಲ್ಲಿ ರಾಜ್ಯದ 30 ಮಳಿಗೆಗಳಿವೆ. ಮಳಿಗೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿದೆ. ಅಲ್ಲದೆ ಕರಕುಶಲ ಕರ್ಮಿಗಳಿಗೆ ವಸತಿ, ಇಲೆಕ್ಟ್ರಿಕ್ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗಿದೆ ಎಂದರು.
ಜ. 18ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 8.30ವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆದಿರುತ್ತದೆ.
ಈ ಮಾರಾಟ ಮಳಿಗೆಯಲ್ಲಿ ಕರಕುಶಲ ಅಲಂಕಾರಿಕ ವಸ್ತುಗಳು, ಹ್ಯಾಂಡ್ ವರ್ಕ್ ಸೀರೆಗಳು, ಸೋಲಾಪುರ ಚಪ್ಪಲಿ, ಚೆನ್ನರಾಯಪಟ್ಟಣದ ಗೊಂಬೆಗಳು, ಹ್ಯಾಂಡ್ ಮೇಡ್ ಪೇಪರ್ ಕವರ್‍ಗಳು ಸೇರಿದಂತೆ ಹಲವಾರು ಕರಕುಶಲ ವಸ್ತುಗಳು ಈ ಪ್ರದರ್ಶನ ಮಳಿಗೆಯಲ್ಲಿದೆ.