ಜ್ಞಾನದ ಪ್ರಾಯೋಗಿಕ ಅನ್ವಯದಿಂದ ಕಲಿಕೆ ಸಾರ್ಥಕ
ಉಜಿರೆ ಜ.4, 2023: ಜ್ಞಾನ ಮತ್ತು ಕೌಶಲ್ಯಗಳು ಪ್ರಾಯೋಗಿಕವಾಗಿ ಅನ್ವಯವಾದಾಗ ಮಾತ್ರ ಕಲಿಕೆಯ ಸಾರ್ಥಕತೆ ಸಾಧ್ಯ ಎಂದು ‘ಜೆಸಿಐ ಬೆಳ್ತಂಗಡಿ ಮಂಜುಶ್ರೀ’ ಯ ಅಧ್ಯಕ್ಷರಾದ ಶಂಕರ್ ರಾವ್ ಬಿ ನುಡಿದರು.
ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಸಮ್ಯಕ್ ದರ್ಶನ್ ಸಭಾಂಗಣದಲ್ಲಿ ವ್ಯವಹಾರ ಆಡಳಿತ ವಿಭಾಗವು ಶನಿವಾರ ಆಯೋಜಿಸಿದ್ದ ಅಂತರ್ ವಿಭಾಗ ‘ಶಾರ್ಟ್ ಫಿಲ್ಮ್ ಫೆಸ್ಟಿವಲ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯ ಹಂತದಿಂದಲೇ ವಿದ್ಯಾರ್ಥಿಗಳು ವಿಭಿನ್ನವಾಗಿ ಯೋಚಿಸುವ ಸಾಮಥ್ರ್ಯ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಕಲಿಕೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಜೊತೆಗೆ ಇದು ವಿದ್ಯಾರ್ಥಿಗಳಲ್ಲಿ ತಾಳ್ಮೆಯ ಮನೋಭಾವವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳುವ ಮೌಲ್ಯಗಳು ಕೊನೆತನಕ ಶಾಶ್ವತವಾಗಿರುತ್ತವೆ. ಜೊತೆಗೆ ಇಂತಹ ಫೆಸ್ಟ್‍ಗಳನ್ನು ಆಯೋಜಿಸುವುದರಿಂದ ನಾಯಕತ್ವ ಗುಣ ಮತ್ತು ಧೈರ್ಯ ಅಭಿವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಮಾತನಾಡಿದರು. ಯುವಜನತೆಗೆ ಅಸಾಧ್ಯವಾದುದನ್ನು ಸಾಧಿಸುವ ಅಂತಃಸತ್ವ ಇರುತ್ತದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು. ಉತ್ತಮ ಮೌಲ್ಯ, ಉತ್ತಮ ಸಂಸ್ಕಾರ ಮತ್ತು ಉತ್ತಮ ನಡುವಳಿಕೆಯಿಂದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ಆಯೋಜಿಸಿದ್ದ ‘ವಿನ್ಸಿಟಿ’ ಎಂಬ ಶೀರ್ಷಿಕೆಯಡಿಯ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿದರು.
ಕಾರ್ಯಕ್ರಮದಲ್ಲಿ ಕಿರುಚಿತ್ರ ಸ್ಪರ್ಧೆಗಾಗಿ ವಿದ್ಯಾರ್ಥಿಗಳೇ ರೂಪಿಸಿದ ಏಳು ಕಿರುಚಿತ್ರಗಳು ಪ್ರದರ್ಶನಗೊಂಡವು. ಕಾರ್ಯಕ್ರಮದ ಕೊನೆಯಲ್ಲಿ ಅತ್ಯುತ್ತಮ ಎರಡು ಕಿರುಚಿತ್ರಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಿದರು. ಪ್ರಥಮ ಸ್ಥಾನವನ್ನು ‘ವರ್ಚುವಲ್ ರಿಯಾಲಿಟಿ’ ಎಂಬ ಕಿರುಚಿತ್ರ ನಿರ್ಮಿಸಿದ ಎಸ್.ಡಿ.ಎಂ ಬಿವೋಕ್‍ನ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗವು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ‘ಅವಲೋಕನಾ’ ಎಂಬ ಕಿರುಚಿತ್ರ ನಿರ್ಮಿಸಿದ ಎಸ್.ಡಿ.ಎಂ ಪದವಿ ಕಾಲೇಜಿನ ತೃತೀಯ ಬಿಎ ವಿದ್ಯಾರ್ಥಿಗಳು ಬಾಚಿಕೊಂಡರು.
ಕಾರ್ಯಕ್ರಮದಲ್ಲಿ ಕಿರುಚಿತ್ರ ರಚನಾಕಾರರಾದ ಸುರೇಂದ್ರ ಜೈನ್, ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶರಶ್ಚಂದ್ರ ಕೆ.ಎಸ್, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ, ಸ್ಮಿತೇಶ್ ಮತ್ತು ವಿದ್ಯಾರ್ಥಿ ಸಂಯೋಜಕ ಸೃಜನ್ ಆರ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಕ್ಷಯ್ ಎಸ್ ಪ್ರಸಾದ್ ಮತ್ತು ಶಾರ್ವರಿ ಪಿ ಭಟ್ ನಿರೂಪಿಸಿದರು. ಸ್ಟೆಲ್ವಿನ್ ಲೋಬೋ ಸ್ವಾಗತಿಸಿದರೆ, ಸೃಜನ್ ಆರ್ ರೈ ವಂದಿಸಿದರು.