ಕನ್ನಡ ಭಾಷೆ ನನಗೆ ಮಾತೃ ಸಮಾನ: ಪ್ರೊ. ರಾಮಚಂದ್ರ ಭಟ್
ಮಂಗಳೂರು, ನ 02, 2022: “ಕನ್ನಡ ಎಂಬುದು ಕೇವಲ ಮಾತನಾಡುವ ಭಾಷೆ ಅಲ್ಲ. ಭಾರತದಂತಹ ದೇಶದಲ್ಲಿ ಈ ಭಾಷೆ ಸಂಸ್ಕೃತಿಯ ಪ್ರತಿರೂಪ. ಇಂಗ್ಲೀಷ್ ಭಾಷೆ ನಮಗೆ ಅವಕಾಶದ ಭಾಷೆ ಆದರೆ ಕನ್ನಡ ಹಾಗಲ್ಲ. ಕನ್ನಡ ನಾಡು -ನುಡಿ-ಸಂಸ್ಕೃತಿಯು ವೈವಿಧ್ಯತೆಯಿಂದ ಕೂಡಿದ್ದು, ವೈವಿಧ್ಯತೆ ಈ ಸಂಸ್ಕೃತಿಯ ಉಸಿರು. ಇಂತಹ ನಾಡಿನಲ್ಲಿ ಜನಿಸಿದ ನಾವೇ ಧನ್ಯರು ಎಂದು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಹೇಳಿದರು.
ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್ಬೈಲ್ನಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
“ಕನ್ನಡ ಭಾಷೆ ಸಂಸ್ಕೃತಿಯ ಬೇರು ಇನ್ನಷ್ಟು ಗಟ್ಟಿಯಾಗಿ ಭದ್ರವಾಗಬೇಕಾದರೆ ಕನ್ನಡ ಭಾಷೆ ಕೂಡ ಗಟ್ಟಿಯಾಗಬೇಕು. ಕನ್ನಡ ಭಾಷೆ ಗಟ್ಟಿಯಾಗಬೇಕಾದರೆ ಕನ್ನಡಿಗರಾದ ನಾವು ಭಾಷೆಯನ್ನು ಉಳಿಸಿ ಬೆಳೆಸಬೇಕು. ಭಾಷೆ, ಸಾಹಿತ್ಯ ಸಂಸ್ಕೃತಿ ಇವುಗಳಿಗೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಕನ್ನಡಾಂಬೆಯ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಏರಬೇಕು,” ಎಂದು ಆಶಿಸಿದರು.
ವಿದ್ಯಾರ್ಥಿಗಳಿಂದ ಕನ್ನಡ ನಾಡು-ನುಡಿಯ ಕುರಿತು ಹಾಡು, ಕವನ ವಾಚನ, ನೃತ್ಯ, ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನೆರೆವೇರಿತು. ಕಾರ್ಯಕ್ರಮದ ಕೊನೆಗೆ ಕನ್ನಡ ನಾಡು-ನುಡಿಯ ಕುರಿತು ರಸಪ್ರಶ್ನೆಯನ್ನು ಆಯೋಜಿಸಿದ್ದು ಇದು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದಿತು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಕರುಣಾಕರ ಬಳ್ಕೂರು, ಕನ್ನಡ ಉಪನ್ಯಾಸಕಿ ರಮ್ಯ ಅನಿಲ್ ಹಾಗೂ ಇನ್ನಿತರ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ಪ್ರಥಮ ಪಿ.ಯು.ಸಿ ವಿಧ್ಯಾರ್ಥಿನಿಯಾದ ದೀಪಿಕಾ ಬಿ. ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.