ಉಸ್ತುವಾರಿ ಸಚಿವರಿಂದ ಪೌರ ಕಾರ್ಮಿಕರಿಗೆ ವಿಶೇಷ ನೇರ ನೇಮಕಾತಿ, ಖಾಯಂ, ಹಕ್ಕು ಪತ್ರ ವಿತರಣೆ
ಮಂಗಳೂರು, ಆ.21, 2022: ರಾಜ್ಯ ಸರ್ಕಾರವು ಪೌರಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರೊಂದಿಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಆ. 20ರ ಶನಿವಾರ ವಿಶೇಷ ನೇರ ನೇಮಕಾತಿಯಡಿಯ ಆಯ್ಕೆಯಾದ 111 ಜನರಿಗೆ ನೇಮಕಾತಿ ಆದೇಶ ಪತ್ರ, ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಹಕ್ಕುಪತ್ರ ವಿತರಣೆ ಹಾಗೂ 64 ಪೌರ ಕಾರ್ಮಿಕರಿಗೆ ಖಾಯಂ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಇತ್ತೀಚೆಗೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದರು, ಪೌರ ಕಾರ್ಮಿಕರ ಕೆಲಸ ಸವಾಲಿನದ್ದಾಗಿದ್ದು ಅವರ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಬೃಹತ್ ಪ್ರಮಾಣದಲ್ಲಿ ಈಡೇರಿಸಿ, ರಾಜ್ಯ ಸರ್ಕಾರ ಪೌರಕಾರ್ಮಿಕರ ಪರವಾಗಿದೆ ಎಂಬ ಸಂದೇಶ ನೀಡಿದ್ದಾರೆ, ಅದರ ಭಾಗವಾಗಿ 111 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ಹಾಗೂ 64 ಜನರಿಗೆ ಖಾಯಂ ಆದೇಶ ಪತ್ರಗಳನ್ನು ಮತ್ತು ಗೃಹ ಭಾಗ್ಯ ಯೋಜನೆಯಡಿ ಆಯ್ಕೆಯಾದ 14 ಪೌರಕಾರ್ಮಿಕರಿಗೆ ಮನೆಯ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಹಾಗೂ ಅಮೃತ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾಗುತ್ತಿವೆ, ಇಂತಹ ಸಂದರ್ಭಗಳಲ್ಲಿ ಮಂಗಳೂರು ನಗರದ ಸ್ವಚ್ಛತೆ ಹಾಗೂ ಹಿರಿಮೆಯನ್ನು ಹೆಚ್ಚಿಸಲು ಪೌರಕಾರ್ಮಿಕರು ಕೈಜೋಡಿಸಬೇಕು, ನೇಮಕಾತಿ ಆದೇಶ ಪತ್ರ ಪಡೆದ 111 ಪೌರ ಕಾರ್ಮಿಕರು ಇಂದಿನಿಂದ ಅಧಿಕೃತವಾಗಿ ಸರ್ಕಾರಿ ನೌಕರರಾಗಿದ್ದಾರೆ, ಪೌರ ಕಾರ್ಮಿಕರ ನೇಮಕಾತಿ ಹಾಗೂ ಖಾಯಂ ಆದೇಶಗಳ ಹಿಂದೆ ಶಾಸಕರಾದ ಡಿ. ವೇದವಾಸ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ, ಅದಕ್ಕಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕರಾದ ಡಿ ವೇದವಾಸ್ ಕಾಮತ್ ಅವರು, ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 64 ಪೌರಕಾರ್ಮಿಕರಿಗೆ ತಮ್ಮ ಸತತ ಹಾಗೂ ವಿಶೇಷ ಪ್ರಯತ್ನದಿಂದಾಗಿ ಸರ್ಕಾರದಿಂದ ನೇರ ನೇಮಕಾತಿ ಮಾಡಿಸಲಾಗಿತ್ತು, ಈ ವೇಳೆ ಕೆಲವು ಪೌರಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಈ 64 ಜನರ ಆದೇಶ ಪತ್ರದ ಜೆರಾಕ್ಸ್ ಪ್ರತಿಯನ್ನು ಫಲಾನುಭವಿಗಳಿಗೆ ನೀಡಿ, ಈ ನೇಮಕಾತಿಗೆ ತಾವೇ ಕಾರಣರು ಎಂದು ಹಣ ಪಡೆದಿರುತ್ತಾರೆ, ಆದರೆ ಅದು ಸರ್ಕಾರದಿಂದ ಆಗಿದ್ದ ನೇಮಕಾತಿ, ಉಚಿತವಾಗಿ ಆದದ್ದು, ಈ ಬಾರಿ 111 ಜನರಿಗೆ ನೇರ ನೇಮಕಾತಿಯಾಗಿದ್ದು ಯಾವುದೇ ಪೌರ ಕಾರ್ಮಿಕ ಸಂಘದ ಪದಾಧಿಕಾರಿಗಳು ಈ ನೇಮಕಾತಿ ತಾವು ಮಾಡಿಸಿದ್ದು, ಅದಕ್ಕೆ ಹಣ ನೀಡುವಂತೆ ಕೋರಿದ್ದಲ್ಲಿ ನೇಮಕಾತಿಗೊಂಡವರು ಯಾರು ಕೂಡ ಹಣ ನೀಡಬಾರದು, ಏಕೆಂದರೆ ಸರ್ಕಾರದಿಂದ ಉಚಿತವಾಗಿ ಆದ ನೇಮಕಾತಿ ಇದಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ್ ಭಂಡಾರಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಕಾರ್ಪೊರೇಟರ್ಗಳು, ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.