ಕಟೀಲು ಕ್ಷೇತ್ರದಲ್ಲಿ ಶ್ರೀ ಕೃಷ್ಣಾಷ್ಟಮೀ ಪ್ರಯುಕ್ತ ವಿಶೇಷ ಪೂಜೆ, ಸೇವೆ

 ಕಟೀಲು ಕ್ಷೇತ್ರದಲ್ಲಿ ಶ್ರೀ ಕೃಷ್ಣಾಷ್ಟಮೀ ಪ್ರಯುಕ್ತ ವಿಶೇಷ ಪೂಜೆ, ಸೇವೆ
Share this post

ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು

ವೈವಸ್ತೇಂತರೇ ಪ್ರಾಪ್ತೇ ಅಷ್ಟಾವಿಂಶತಿಮೇ ಯುಗೇ| ಶುಂಭೋ ನಿಶುಂಭಶ್ಚೈವಾನ್ಯಾವುತ್ಪತ್ಸ್ಯೇತೇ ಮಹಾಸುರೌ|| ನಂದಗೋಪಗೃಹೇ ಜಾತಾ ಯಶೋದಾಗರ್ಭಸಂಭವಾ | ತತಸ್ಥೌ ನಾಶಯಿಷ್ಯಾಮಿ ವಿಂಧ್ಯಾಚಲನಿವಾಸಿನೀ||


ಎಂದು ದೇವಿಯು ದೇವೀಮಾಹಾತ್ಮ್ಯದಲ್ಲಿ ಹೇಳುವ ಮಾತೊಂದಿದೆ. ಶುಂಭನಿಶುಂಬ ದೈತ್ಯರು 28 ನೆಯ ಕಲಿಯುಗದ ವೈವಸ್ವತಮನ್ವಂತರದಲ್ಲಿ ಮತ್ತೊಮ್ಮೆ ಹುಟ್ಟಿಬರುವಾಗ ತಾನು ನಂದಗೋಕುಲದ ನಂದಗೋಪನ ಮನೆಯಲ್ಲಿ ಯಶೋದೆಯ ಮಗಳಾಗಿ ಹುಟ್ಟಿ ಬಂದು ವಿಂಧ್ಯಾಚಲನಿವಾಸಿನಿಯಾಗಿ ಸಂಹರಿಸುತ್ತೇನೆ ಎಂಬುದು ಅದರ ಅರ್ಥ. ಕೃಷ್ಣನನ್ನು ಯಶೋದೆಯ ತೊಟ್ಟಿಲಲ್ಲಿಟ್ಟು ಅವನ ಬದಲಿಗೆ ಕಂಸನ ಕಾರಾಗ್ರಹಕ್ಕೆ ಅವಳನ್ನೇ ಕರೆತರುವುದು. ಅವಳೇ ಆಕಾಶಕ್ಕೆ ಜಿಗಿದು ಮತ್ತೆ ಕಂಸನೆದುರಲ್ಲೇ ಅದೃಶ್ಯಳಾಗುವುದು.ಇವಳೇ ಕಂಸಾರಿಸೋದರಿ. ಇವಳೇ ದುರ್ಗೆ. ಇವಳ ನಕ್ಷತ್ರ ಕೃತ್ತಿಕಾ. ಕೃಷ್ಣ ಹುಟ್ಟಿದ್ದು ರೋಹಿಣಿಗೆ. ಇಬ್ಬರ ಜನನವೂ ಕೃಷ್ಣಾಷ್ಟಮಿಯಂದೇ.
ಈ ಅವತಾರದ ದುರ್ಗೆಯೇ ಮತ್ತೆ ಭ್ರಮರಾಂಬಿಕೆಯಾಗಿ ಅರುಣಾಸುರನನ್ನು ಕೊಲ್ಲುವುದು. ಹಾಗಾಗಿ ಭ್ರಮರಾಂಬಿಕೆಯ ನಕ್ಷತ್ರವನ್ಮೂ ಕೃತ್ತಿಕಾ ಎಂಬುದಾಗಿಯೇ ನಂಬಲಾಗುತ್ತದೆ. ಹಾಗಾಗಿ ಶ್ರೀಕ್ಷೇತ್ರಕಟೀಲಿನಲ್ಲಿ ದುರ್ಗೆಯ ನಕ್ಷತ್ರ ಕೃತ್ತಿಕಾ. ಅವಳ ಜನ್ಮತಿಥಿಯೂ ಕೃಷ್ಣಾಷ್ಟಮೀ.

ಈ ಕಾರಣಕ್ಕಾಗಿಯೇ ಕಟೀಲಿನಲ್ಲಿ ಕೃಷ್ಣಾಷ್ಟಮೀ ಉತ್ಸವದ ವಾತಾವರಣ. ದೇವಿಗೆ ಈ ಕೃಷ್ಣಾಷ್ಟಮೀ ದಿನದಲ್ಲಿ ಎರಡು ಭಾರಿ ಅಭಿಷೇಕ( ದೇವಿಗೆ ನವರಾತ್ರಿ ಮತ್ತು ಈ ಕೃಷ್ಣಾಷ್ಟಮೀ ದಿನದಲ್ಲಿ ಮಾತ್ರ ಎರಡು ಭಾರಿ ಅಭಿಷೇಕ).

ಅಭಿಷೇಕದ ನಂತರ ತಾಯಿಗೆ ಪ್ರತ್ಯೇಕ ಅಲಂಕಾರ. ಸಂಜೆ ದೇವೀ ಪ್ರೀತ್ಯರ್ಥವಾಗಿ ತಾಳಮದ್ದಲೆ. ರಾತ್ರಿ ಕೃಷ್ಣನ ಮೃಣ್ಮಯ ಮೂರ್ತಿಯಪ್ರತಿಷ್ಟಾಪನೆ ಮಾಡಿ ಕೃಷ್ಣನಿಗೂ ಅರ್ಘ್ಯಪ್ರದಾನ. ಆ ದಿನ ಏಕಾದಶಿಯಂತೆ ಉಪವಾಸ‌. ಹೀಗೆ ಕಟೀಲಮ್ಮನ ಜನ್ಮದಿನದ ಆಚರಣೆ.

ಇಲ್ಲಿಗೆ ಮುಗಿಯಲಿಲ್ಲ. ಮರುದಿನ ಅಷ್ಟಮೀದ್ವಾದಶಿ. ಮುಂಜಾನೆಯೇ ಮಹಾಪೂಜೆಯಾಗಿ ಆರಾಧನೆ‌ . ಸಾಯಂಕಾಲ ಕೃಷ್ಣನ ಮೃಣ್ಮಯಮೂರ್ತಿಯ ಪ್ರೀತ್ಯರ್ಥ ವಿಜೃಂಭಣೆಯ ಮೊಸರುಕುಡಿಕೆಯಾಗಿ ಕೃಷ್ಣನ ವಿಸರ್ಜನೆ.‌ರಾತ್ರಿ ಕಟೀಲಮ್ಮನ ಪ್ರೀತ್ಯರ್ಥವಾಗಿ ಆಟ( ಯಕ್ಷಗಾನ). ಆ ದಿನ ಆರೂ ಮೇಳಗಳ ದೇವರಿಗೆ ಪೂಜೆಯಾಗಿ ಆಟ ನಡೆಯುವಾಗ ಒಂದೇ ರಂಗಸ್ಥಳದಲ್ಲಿ ಆರೂ ಮೇಳಗಳ ದೇವರ ಕಿರೀಟಗಳನ್ನು ನೋಡುವ ಅವಕಾಶ. ಸೇವಾರ್ಥಿಗಳಾಗಿ ಬರುವ ಕಲಾವಿದರಿಗೂ ಸೇವೆ ಮಾಡುವ ಅವಕಾಶ.

ಹೀಗೆ ಶ್ರೀಕ್ಷೇತ್ರಕಟೀಲಿನ ಆರಾಧ್ಯಮೂರ್ತಿಯ ಜನ್ಮದಿನ ಆಚರಣೆ. ಈವರ್ಷ 18.8.2022 ಗುರುವಾರ ನಡೆಯಲಿದೆ.ಮರುದಿನ ಅಂದರೆ 19.08.222 ಶುಕ್ರವಾರ ಮೊಸರುಕುಡಿಕೆ‌ ಮತ್ತು ಆಟ ನೆರವೇರಲಿದೆ.

ಭಕ್ತಾಭಿಮಾನಿಗಳೇ ಈ ಪರ್ವದಿನದಲ್ಲಿ ತಾವು ದೇವರದರ್ಶನ ಪಡೆದು ಯಥಾಶಕ್ತಿ ಸೇವೆಗಳಲ್ಲಿ ತೊಡಗಿಸಿಕೊಂಡು ಶ್ರೀದೇವರ ಶ್ರೀಮುಡಿಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಿ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!