ಅಮೃತ ಮಹೋತ್ಸವದ ಅಮೃತ ರಸಧಾರೆ- ಹರ್ ಘರ್ ತಿರಂಗಾ

 ಅಮೃತ ಮಹೋತ್ಸವದ ಅಮೃತ ರಸಧಾರೆ- ಹರ್ ಘರ್ ತಿರಂಗಾ
Share this post

ಅತ್ಯಧ್ಭುತ ಯೋಚನೆ ಯೋಜನೆಯ ಸಂಯೋಜನೆ ಈ ಹರ್ ಘರ್ ತಿರಂಗಾ ಎಂಬ ಅತಿ ಸುಂದರ ಪರಿಕಲ್ಪನೆ. ಮನೆಮನಗಳಲ್ಲಿ ರಾಷ್ಟ್ರಪ್ರೇಮದ ಭಾವ ಉಕ್ಕಿ ಹರಿಯುವ ಸದ್ಭಾವನೆಯನ್ನು ಮೂಡಿಸಿದ ಮಹಾನುಭಾವನಿಗೆ ನಮೋ ಎನ್ನಲೇಬೇಕು.

ಇಪ್ಪತ್ತೆಂಟು ಕಂದಮ್ಮಗಳನ್ನು ತನ್ನ ಒಡಲಲ್ಲಿ ಹೊತ್ತ ಭುವನ ಮನೋಹರಿ ನಮ್ಮಮ್ಮ ಭಾರತಾಂಬೆ ಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂತಸದ ಸಂಭ್ರಮ.

ಜಾತಿ ಭೇದವಿಲ್ಲದೆ ಅತ್ಮೀಯತೆಯ ಕಣ್ಗಳಿಂದ ಮಗುವಿಂದ ಮುದಿಹರೆಯದವರೆಗೆ ಎಲ್ಲರೂ ಪ್ರತಿ ಮನೆ ಮನೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ತಮ್ಮ ತಮ್ಮ ವಾಹನಗಳಲ್ಲಿ ರಾಷ್ಟ್ರಧ್ವಜವನ್ನು ಹಾಕಿಕೊಂಡು ಸಂಭ್ರಮಿಸುವುದನ್ನು ನೋಡುವುದೇ ಒಂದು ಚಂದ. ಹೌದು…ನಾನೊಬ್ಬ ಭಾರತೀಯನೆಂದ ಮೇಲೆ ನನಗೆ ನನ್ನ ರಾಷ್ಟ್ರಧ್ವಜದ ಮಹತ್ವದ ಬಗ್ಗೆ ಅರಿವು ಮಾಡಿಕೊಳ್ಳಬೇಕಾದ್ದು ನನ್ನ ಕರ್ತವ್ಯ. ಜಾತಿಯ ಪರದೆ – ಪರಿಧಿ ಇರಬಾರದು. ಈ ತ್ರಿವರ್ಣ ಧ್ವಜ ನಮ್ಮ ದೇಶದ ಗೌರವಾದರದ ಸಂಕೇತ.

ಇದನ್ನು ವಿನ್ಯಾಸ ಮಾಡಿದ ಮಹಾತ್ಮ ಪಿಂಗಳಿ ವೆಂಕಯ್ಯ ರವರಿಗೆ ಶರಣು ಎನ್ನಲೇಬೇಕು.

ಸಮಾನ ಅಳತೆಯ ಕೇಸರಿ -ಬಿಳಿ – ಹಸಿರು ಬಣ್ಣದ ಹತ್ತಿಯಿಂದ ನೆಯ್ದ ಬಟ್ಟೆಯ ಧ್ವಜದ ನಡುವೆ ನೀಲವರ್ಣನ ನೀಲ ಚಕ್ರದಂತೆ 24 ಗೆರೆ ಅಥವಾ ಕಡ್ಡಿಗಳನ್ನೊಳಗೊಂಡ ಅಶೋಕ ಚಕ್ರ ಭಕ್ತಿಭಾವವನ್ನು ತುಂಬುತ್ತದೆ.

ಈ ತ್ರಿವರ್ಣ ರಂಜಿತ ಧ್ವಜದ ಮೇಲ್ಬಾಗ ಕೇಸರಿ ಬಣ್ಣದ್ದಾಗಿದ್ದು ಧ್ಯೆರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತ. ಅದೇಷ್ಟೋ ಮಹಾನುಭಾವರು ತಾಯಿಯ ಮಾನ ರಕ್ಷಣೆಗೆ ಜೀವ ತೆತ್ತವರು ಇರಬಹುದು, ಕೀರ್ತಿ ತಂದವರು ಇರಬಹುದು, ತಾಯಿಯ ವೈಭವವನ್ನು ಶ್ರೀಮಂತಗೊಳಿಸಿದವರು ಇರಬಹುದು. ಇವರೆಲ್ಲರ ನೆನಪನ್ನು ಸಾರುತ್ತದೆ ಈ ಬಣ್ಣ.

ತನ್ನ ಪ್ರೀತಿಯ ಸಂಸಾರವನ್ನು ಬಿಟ್ಟು ಜೀವ ಪಣಕ್ಕಿಟ್ಟು ಗಡಿ ಕಾಯುವ ಸಹೋದರರ ತ್ಯಾಗವನ್ನು ನಾವು ಈ ಬಣ್ಣದಲ್ಲಿ ಕಾಣೋಣ. ರಾಷ್ಟ್ರಪ್ರೇಮ ತೋರಿದ ಸಂಗೊಳ್ಳಿ ರಾಯಣ್ಣ, ವೀರ ಎಚ್ಚಮರಂತಹ ಕೆಚ್ಚೆದೆಯ ವೀರರು, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ’ ಕೆಳದಿಯ ಮಲ್ಲಮ್ಮರಂತಹ ಸ್ತ್ರೀಯೋಧರು, ಕೃಷ್ಣದೇವರಾಯ, ಹರ್ಷವರ್ಧನ,ಸಮುದ್ರಗುಪ್ತ ಚಂದ್ರಗುಪ್ತ ಮೌರ್ಯ, ಅಶೋಕ ರಂತಹ ಸಾಮ್ರಾಟರು, ಚಾಣಕ್ಯ ವಿದ್ಯಾರಣ್ಯರಂತಹ ಆಚಾರ್ಯ ಶ್ರೇಷ್ಟರು, ಮಾಂಧಾತಾ , ನಹುಷ, ಅಂಬರೀಷ , ಸಗರ, ಪೃಥು, ಶ್ರೀರಾಮ, ಯಯಾತಿ, ಯದು, ಭರತ, ಧ್ರುವ ರಂತಹ ಪುರಾಣ ಪ್ರಸಿದ್ಧ ರಾಜರ ಧ್ಯೆರ್ಯ, ಮಹಾತ್ಮಾ ಗಾಂಧಿ, ಲಾಲ್ ಬಾಲ್ ಪಾಲ್, ಸುಭಾಷ್ ಚಂದ್ರ ಭೋಸ್ ರಂತಹ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಂದ, ತೀವ್ರಗಾಮಿ ಕ್ರಾಂತಿಕಾರಿ ಹೋರಾಟಗಾರರನ್ನು ಇದು ನೆನಪಿಸುತ್ತದೆ.

ಇನ್ನು ನಡುಭಾಗದ ಶ್ವೇತ ವರ್ಣ. ಈ ಬಣ್ಣ ಸತ್ಯ ಶಾಂತಿ ಹಾಗೂ ಶುದ್ಧತೆಯ ಸಂಕೇತ. ಸನಾತನ ಧರ್ಮವನ್ನು ಮೈಗೂಡಿಸಿಕೊಂಡಿರುವ ನಮ್ಮ ದೇಶ ಇಡೀ ವಿಶ್ವದೆಲ್ಲಡೆ ಸತ್ಯ ಶಾಂತಿಯ ಬೆಳಕನ್ನು ಪಸರಿಸುತ್ತ ಬಂದಿದೆ. ವಿವೇಕಾನಂದ ರಾಮಕೃಷ್ಣ ಪರಮಹಂಸ ಸಮಾಜ ಸುಧಾರಕರು, ಕನಕ ಪುರಂದರ, ವಿಜಯ ರಂತಹ ದಾಸಶ್ರೇಷ್ಟರು, ಶಂಕರ ರಾಮಾನುಜ ಮಧ್ವಾಚಾರ್ಯರಂತಹ ಸಾಧು ಸಂತರು, ಬುದ್ಧ, ಮಹಾವೀರ, ಸರ್ವಜ್ಞ, ಅಕ್ಕಮಹಾದೇವಿಯಂತಹ ಶರಣರು ಇವರೆಲ್ಲ ಸತ್ಯ ಶಾಂತಿ ಧರ್ಮಗಳ ಆರಾಧಕರು. ವಿವಿಧತೆಯಲ್ಲಿ ಏಕತೆ ನಮ್ಮ ಏಕೈಕ ಮಂತ್ರ. ಹಲವು ಜಾತಿ, ಹಲವು ಸಂಸ್ಕೃತಿ, ಹಲವು ರಾಜ್ಯ, ಹಲವು ಭಾಷೆಗಳ ನೆಲೆವೀಡು ನಮ್ಮ ಭಾರತ . ಒಳಗೊಳಗೆ ಎಷ್ಟೇ ಕಚ್ಚಾಡಿಕೊಂಡರೂ ಒಂದು ಮನೆಯಡಿ ಇರುವ ಅಣ್ಣ ತಮ್ಮ ಅಕ್ಕತಂಗಿಯರಂತೆ ದೇಶಕ್ಕೆ ಆಪತ್ತು ಎಂದಾಗ ಅವರೆಲ್ಲ ಒಂದು. ಭಾರತಾಂಬೆಯ ರಕ್ಷಣೆಯೇ ಅವರ ಕೇಂದ್ರಬಿಂದು. ಇದು ನಮ್ಮ ದೇಶದ ಜನರ ನಿಜವಾದ ಅನ್ಯೋನ್ಯತೆ ಮತ್ತು ಐಕ್ಯಮತ್ಯದ ಶಕ್ತಿ ಹಾಗೂ ದೇಶಪ್ರೇಮ.

ಇನ್ನು ತ್ರಿವರ್ಣ ಧ್ವಜದ ಕೆಳಭಾಗದಲ್ಲಿರುವ ಬಣ್ಣ ಹಸಿರು ಬಣ್ಣ. ಇದು ರಾಷ್ಟ್ರದ ಪ್ರಗತಿಯ ಸಂಕೇತ, ಸಮೃದ್ಧಿಯ ಸಂಕೇತ. ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸುಮಧುರ ಬಾಂಧವ್ಯ, ಸಕಲ ಜೀವರಾಶಿಗಳ ಜೊತೆಗೆ ಬದುಕುವ ಅವಿನಾಭಾವ ಸಂಬಂಧ, ಅನುಬಂಧ. ಭಾರತಾಂಬೆ ಸುಂದರ ಚೆಲುವೆ. ಸಂಪದ್ಭರಿತೆ .. ಸಂಪನ್ಮೂಲಗಳ ಅಮೃತ ಕಲಶವನ್ನು ಕೈಯಲ್ಲಿ ಹಿಡಿದು ಕೊಂಡವಳು. ಹಾಗಾಗಿ ವಿಶ್ವದೆಲ್ಲರ ದೃಷ್ಟಿ ಆಕೆಯ ಮೇಲೆ.

ಮಾತೆ ಸುಜಲೆ, ಸುಫಲೆ, ಸಸ್ಯ ಶ್ಯಾಮಲೆ, ಆಕೆಯ ಸೀರೆಯ ಸೆರಗಿನಂತೆ ಕಂಗೊಳಿಸುವ ಗಂಗಾ ಸಿಂಧು ಸರಸ್ವತಿ ಯಮುನಾ ಗೋದಾವರಿ ನರ್ಮದಾ, ಭೀಮರಥೀ ಸರಯೂ ಶ್ರೀ ಗಂಡಕೀ ಗೋಮತಿ ಕೃಷ್ಣೇ ಕಾವೇರಿ ಕಪಿಲಾ ಪ್ರಯಾಗ ವಿನತಾ ನೇತ್ರಾವತಿ ಹೀಗೆ ನೂರಾರು ನದಿಗಳ ಉಗಮ ಸ್ಥಾನ ಆಕೆಯ ಮಡಿಲು.

ಶ್ರೀ ಮೇರು ಹಿಮಾಲಯ, ಮಂದರಗಿರಿ, ಕೈಲಾಸ, ಶೈಲ, ಮಾಹೇಂದ್ರ, ಮಲಯ, ರೈವತ ವಿಂಧ್ಯ, ಸಹ್ಯಾದ್ರಿ, ಗಂಧಮಾದನಗಿರಿ, ಮೈನಾಕ, ಗೋಮಂತಕ ದಂತಹ ಪರ್ವತ ಗಿರಿಶಿಖರಗಳು ಆಕೆಯ ಸೊಬಗು.
ಕೃಷ್ಣ, ಏಸು, ಅಲ್ಲಾ …ಎಲ್ಲಾ ತನ್ನ ಮಕ್ಕಳನ್ನು ಸಮಚಿತ್ತದಿಂದ ನೋಡುವವಳು ಭಾರತಾಂಬೆ. ತ್ರಿವರ್ಣ ಧ್ವಜದಲ್ಲಿ ಅವರವರ ಭಾವಗಳಿಗೆ ಸಂಬಂಧಿಸಿದಂತೆ ಹಿಂದೂಗಳ ಕೇಸರಿ ವರ್ಣ, ಕ್ರೈಸ್ತರ ಶ್ವೇತ ವರ್ಣ, ಮುಸಲ್ಮಾನರ ಹಸಿರು ವರ್ಣಗಳನ್ನು ತನ್ನೊಳಗೆ ತುಂಬಿಸಿಕೊಂಡು ಶತ್ರುಗಳ ದಮನಕ್ಕೆ ಅವರನ್ನು ತನ್ನ ತ್ರಿಶೂಲದ ಶಕ್ತಿಯನ್ನಾಗಿಸಿಕೊಂಡಿದ್ದಾಳೆ.

ಈ ತ್ರಿವರ್ಣ ಧ್ವಜ 1931 ರಲ್ಲಿ ರೂಪುಗೊಂಡಿದ್ದು 1947ರ ಜುಲೈ 22 ರಂದು ಚರಕದ ಬದಲು ಸಾಮ್ರಾಟ ಅಶೋಕನ ಕಡು ನೀಲಿ ವರ್ಣದ ಚಕ್ರವನ್ನು ಇದಕ್ಕೆ ಅಳವಡಿಸಲಾಯಿತು. ಸಾಮ್ರಾಟ ಅಶೋಕನ ಧರ್ಮ ಸಾಮ್ರಾಜ್ಯದ ಧರ್ಮ ಚಕ್ರ ಸಿಂಹಲಾಂಛನ ಭಾರತೀಯರ ಹೆಮ್ಮೆ.

ಈ ಧರ್ಮ ಚಕ್ರದಲ್ಲಿ 24 ಗೆರೆಗಳಿದ್ದು ಅದನ್ನು 24 ಗಂಟೆಗಳ ಸಮಯ ಅಥವಾ ಕಾಲ ಚಕ್ರ ವೆಂದು ಕೂಡ ಕರೆಯುತ್ತಾರೆ. ಇದು ಬದುಕಿನ ಮಜಲುಗಳನ್ನು ಪ್ರೀತಿ, ಆದರ, ಸತ್ಕಾರ, ಕಲ್ಯಾಣ ಆಧ್ಯಾತ್ಮಿಕ ಜ್ಞಾನ ಇತ್ಯಾದಿ ಸದ್ಭಾವನೆಗಳನ್ನು ಅರ್ಥೈಸುವ ಜೀವನ ಚಕ್ರವೂ ಹೌದು. ಇದರ ಹಿಂದಿನ ಅಂತಃಸತ್ವ ಸಾಮಾಜಿಕ ಸದ್ಭಾವನೆ. ಇಂತಹ ಅದ್ಭುತ ಅರ್ಥ,ತತ್ವ, ಸತ್ವಗಳನ್ನು ಹೊಂದಿರುವ ತ್ರಿವರ್ಣ ಧ್ವಜವನ್ನು ಪ್ರತಿಯೊಬ್ಬ ಭಾರತೀಯನು ತನ್ನ ಮನಸ್ಸಿಗೆ ಹತ್ತಿರ ಮಾಡಿಕೊಳ್ಳಲು, ಧ್ವಜವನ್ನು ತನ್ನ ಮನೆಯ ಒಬ್ಬ ಸದಸ್ಯನಂತೆ ಕಾಣಬೇಕು.

ನಾವೆಲ್ಲ ಸಹೋದರತೆಯ ಬಾಂಧವ್ಯದ ಜೊತೆ ಎಲ್ಲರೊಳಗೊಂದಾಗು ಎಂಬ ಚಿಂತನೆಯ ಜೊತೆ ಬದುಕಬೇಕು, ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಎಂಬ ಪರಿಕಲ್ಪನೆ ಅಮೃತ ರಸಧಾರೆಯಾಗಿ ಪರಿಣಮಿಸಬೇಕು ಎಂಬ ರಾಷ್ಟ್ರ ನಾಯಕರ ಆಶಯ ನಿಜವಾಗಿಯೂ ಪ್ರಶಂಸನೀಯ.

ಲೇಖನ, ಚಿತ್ರ:
ರಾಜೇಶ್ ಭಟ್ ಪಣಿಯಾಡಿ

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!