ಹರ್ ಘರ್ ತಿರಂಗಾ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಕರೆ

 ಹರ್ ಘರ್ ತಿರಂಗಾ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಕರೆ
Share this post

ಮಂಗಳೂರು,ಆ.11, 2022: ಪ್ರತಿಯೊಂದು ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ಮೇಲೆ ಆ. 13 ರಿಂದ 15 ರವರೆಗೆ ಹರ್ ಘರ್ ತಿರಂಗ ಅಭಿಯಾನದಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ದೇಶಪ್ರೇಮ ಮೆರೆಯಲು ಅನುಕೂಲವಾಗುವಂತೆ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾಷ್ಟ್ರಧ್ವಜಗಳನ್ನು ಸಮರ್ಪಕವಾಗಿ ವಿತರಿಸಬೇಕೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಆ.11ರ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಈ ಸೂಚನೆ ನೀಡಿದರು.

ಹರ್ ಘರ್ ತಿರಂಗಾ ಅಭಿಯಾನದಡಿ ಧ್ವಜಗಳ ವಿತರಣೆ ಸುಸೂತ್ರವಾಗಿ ಆಗಬೇಕು. ನಾಗರೀಕರಿಗೆ ಧ್ವಜಗಳು ದೊರೆಯಲು ಅನುಕೂಲವಾಗುವಂತೆ ಜನ ಸಂಪರ್ಕ ಹೆಚ್ಚಿರುವ ಸ್ಥಳಗಳಲ್ಲಿ ಮಾರಾಟ ಕೇಂದ್ರಗಳನ್ನು ತೆರೆಯಬೇಕು. ಈಗಾಗಲೇ ಕೇಂದ್ರದಿಂದ ಬಂದಿದ್ದ 1.75 ಲಕ್ಷ ದ್ವಜಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮೂಲಕ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಿಗೆ ಹಸ್ತಾಂತರಿಸಲಾಗಿದೆ. ಜಿಲ್ಲೆಯ ಸ್ತ್ರೀ-ಶಕ್ತಿ ಸಂಘಗಳು ಸಿದ್ದಪಡಿಸಿಕೊಟ್ಟಿದ್ದ 1.75 ಲಕ್ಷ ದ್ವಜಗಳ ವಿತರಣೆಯು ಆಗಿದೆ. ಮುಖ್ಯವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಯೊಂದು ಮನೆಗೂ ರಾಷ್ಟ್ರಧ್ವಜವನ್ನು ಒದಗಿಸಬೇಕು.  ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ವಾರ್ಡ್‍ವಾರ್ ಅಥವಾ ಜನರು ಹೆಚ್ಚು ಸೇರುವ ಸ್ಥಳದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದರು.

ಬಿಲ್ ಕಲೆಕ್ಟರ್ ಅಥವಾ ನೀರು ಗಂಟಿಗಳ ಮೂಲಕ ಪ್ರತಿ ಮನೆಗೂ ಧ್ವಜ ತಲುಪಿಸುವ ವ್ಯವಸ್ಥೆ ಆಗಬೇಕು. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಜನಪ್ರತಿನಿಧಿಗಳ ಸಹಕಾರದಲ್ಲಿ ಪ್ರತಿ ಮನೆಗೂ ರಾಷ್ಟ್ರಧ್ವಜ ತಲುಪುವಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ರಾಷ್ಟ್ರಧ್ವಜದ ಘನತೆ ಗೌರವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ಉಂಟಾಗಬಾರದು. ಅದಕ್ಕಾಗಿ ರಾಷ್ಟ್ರಧ್ವಜಾರೋಹಣದ ವೇಳೆ ಧ್ವಜ ಸಂಹಿತೆಯನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಧ್ವಜವನ್ನು ಮಡಚಿ ಇಡುವುದಕ್ಕೂ ಒಂದು ಕ್ರಮವಿದೆ, ಧ್ವಜವನ್ನು ಉಲ್ಟಾ ಹಾರಿಸುವುದು, ಅದನ್ನು ವಿರೂಪ ಗೊಳಿಸುವುದು, ಹರಿದುಹೋದ ಹಾಗೂ ಕೊಳೆಯಾದ, ಧ್ವಜದ ಮೇಲೆ ಇತರೆ ಬಣ್ಣಗಳನ್ನು ಬಳಸಿರುವ ಧ್ವಜಗಳನ್ನು ಬಳಸಬಾರದು. ಈ ರೀತಿ ಆದಲ್ಲೀ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ 1971ರ ಕಾಯ್ದೆಯಂತೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಈ ಬಗ್ಗೆ ಜಿಲ್ಲೆಯ ಜನತೆಗೆ ಸಂಬಂಧಿಸಿದವರು ಜಾಗೃತಿ ಮೂಡಿಸಬೇಕು ಎಂದರು.

ಆ.13 ರಿಂದ 15 ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಪ್ರಮುಖವಾಗಿ ಪ್ರತಿ ದಿನ ಧ್ವಜಾರೋಹಣ ನೆರವೇರಿಸುವ ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸೂರ್ಯಾಸ್ತಮಾನದಲ್ಲಿ ಧ್ವಜವನ್ನು ಇಳಿಸಬೇಕು. ಸೂರ್ಯಾಸ್ತದ ನಂತರವೂ ಧ್ವಜವನ್ನು ಇಳಿಸದಿದ್ದರೆ ಅಂತಹ ಕಚೇರಿಗಳ  ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಚೇರಿಯ ಕಟ್ಟಡಗಳ ಮೇಲೆ 13 ರಿಂದ 15 ರವರೆಗೆ ನಿರಂತರವಾಗಿ ಧ್ವಜಾರೋಹಣವನ್ನು ನೆರವೇರಿಸಬಹುದು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸುಳ್ಯದ ಅಮರ ಸುಳ್ಯ,  ಮಂಗಳೂರಿನ ಬಾವುಟಗುಡ್ಡ ಹಾಗೂ ಉಳ್ಳಾಲದಲ್ಲಿ ಏಕಕಾಲಕ್ಕೆ ಅರ್ಥಗರ್ಭಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯತ್‍ಗಳಲ್ಲಿ ಧ್ವಜಾರೋಹಣದ ಪ್ರಕ್ರಿಯೆಗಳ ಡಾಕ್ಯುಮೆಂಟರಿಗಳನ್ನು ಮಾಡಿಕೊಳ್ಳಬೇಕು ಹಾಗೂ ಅದನ್ನು ಆಜಾದಿ ಕಾ ಅಮೃತ ಮಹೋತ್ಸವ ಪೊರ್ಟಲ್‍ನಲ್ಲಿ ಅಪ್ಡೇಟ್ ಮಾಡಬೇಕು. ಪ್ರತಿಯೊಂದು ಗ್ರಾಮ ಪಂಚಾಯತ್‍ಗಳಲ್ಲೂ ಜಾಥಾವನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ಆಗಸ್ಟ್ 15ರ ಸಂಜೆ ಗೌರವಯುತವಾಗಿ ಧ್ವಜವನ್ನು ಇಳಿಸಿ, ಗೌರವದಿಂದ ಎತ್ತಿ ಇಡಬೇಕು. ಧ್ವಜ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಅಂತೆಯೇ ಎಲ್ಲರೂ ಸೇರಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಅವರು ಕೋರಿದರು.

ಅಸಂಘಟಿತ ಕಾರ್ಮಿಕ ವಲಯಕ್ಕೆ ಮೂರು ಸಾವಿರ ರೂ.ಗಳ ಪಿಂಚಣಿ ನೀಡುವ ಶ್ರಮ-ಯೋಗಿ ಮನ್ ಧನ್ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಸಂಘಟಿತ ವಲಯಗಳ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಸೂಚಿಸಿದರು.

ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು  ವಿಜೃಂಭಣೆಯಿಂದ ಆಚರಿಸುವಂತೆ ಅವರು ಕರೆ ನೀಡಿದರು.

ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!