ಮಕ್ಕಳು ಉತ್ತಮ ಆರೋಗ್ಯವಂತರಾಗಬೇಕು: ಡಾ. ಕಿಶೋರ್ ಕುಮಾರ್
ಮಂಗಳೂರು,ಆ.11, 2022: ಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಲು ಉತ್ತಮವಾದ ಆರೋಗ್ಯ ಪಡೆಯಬೇಕು, ಉತ್ತಮ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸದೃಢವಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಹೇಳಿದರು.
ಅವರು ಆ.10ರ ಬುಧವಾರ ನಗರದ ಮಣ್ಣಗುಡ್ಡೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲೇಡಿಹಿಲ್(ಬಿಜೈ) ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಕಾರ್ಯಕ್ರಮದಲ್ಲಿ ಜಂತುಹುಳ ನಿವಾರಣಾ ಮಾತ್ರೆಯನ್ನು ಮಕ್ಕಳಿಗೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಭವಿಷ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಪಡೆಯಲು ಅನುಕೂಲವಾಗಲು ಆರೋಗ್ಯ ಇಲಾಖೆಯಿಂದ ವರ್ಷಕ್ಕೆ ಎರಡು ಬಾರಿ ಅಂದರೆ ಆರು ತಿಂಗಳ ಅಂತರದಲ್ಲಿ ಪ್ರತಿಯೊಂದು ಮಗುವು 1 ರಿಂದ 19 ವರ್ಷದೊಳಗ ಎಲ್ಲಾ ಮಕ್ಕಳಿಗೂ ಜಂತುಹುಳ ನಿವಾರಣಾ ಮಾತ್ರೆಯನ್ನು ನೀಡಲಾಗುತ್ತಿದೆ. ಆ ಮೂಲಕ ಮಕ್ಕಳ ಆರೋಗ್ಯ ಸುಧಾರಣೆ ಮಾಡುವ ಮೂಲಕ ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸಲು ನೆರವಾಗಲಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿದ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್, ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ದೇಶ ಹಾಗೂ ಜಂತುಹುಳು ಹರಡುವ ಸಾಧ್ಯತೆಗಳು, ಜಂತುಹುಳು ಭಾದೆಯ ಲಕ್ಷಣಗಳು, ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.
ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಾಪಬೋವಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಜಯಶ್ರೀ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಸ್ವಾಗತಿಸಿ, ನಿರೂಪಿಸಿದರು.