ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅಪಮಾನವಾಗದಂತೆ ಎಚ್ಚರಿಕೆ ವಹಿಸಿ: ರೂಪಾಲಿ ನಾಯ್ಕ್

 ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅಪಮಾನವಾಗದಂತೆ ಎಚ್ಚರಿಕೆ ವಹಿಸಿ: ರೂಪಾಲಿ ನಾಯ್ಕ್
Share this post

ಕಾರವಾರ ಆ 10, 2022 : ದೇಶದಾದ್ಯಂತ ಅಗಸ್ಟ್ 13 ರಿಂದ 15ರ ವರೆಗೆ ದೇಶಾಭಿಮಾನದಿಂದ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿ ಮನೆಗಳ ಮೇಲೆ ಆರೋಹಣ ಮಾಡಲು ವಿತರಿಸುತ್ತಿರುವ ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗ ಎಚ್ಚರಿಕೆ ವಹಿಸಬೇಕು ಎಂದು ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ್ ತಿಳಿಸಿದರು.

ನಗರದ ತಾಲೂಕ್ ಪಂಚಾಯತ್‌ನ ಸಭಾಂಗಣದಲ್ಲಿ ಬುಧವಾರ ಜರುಗಿದ ವಿವಿಧ ಇಲಾಖೆಗಳ ತಾಲೂಕ್ ಮಟ್ಟದ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶಾಭಿಮಾನದ ಸಂಕೇತವಾಗಿ ಪ್ರತಿಯೊಬ್ಬರೂ ರಾಷ್ಟ್ರಧ್ವಜಕ್ಕೆ ಗೌರವ ಕೊಡುವ ಉದ್ದೇಶದಿಂದ “ಹರ್ ಘರ್ ತಿರಂಗಾ” ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಹಶಿಲ್ದಾರ ಕಚೇರಿಯಿಂದ ಹಾಗೂ ಆಸಕ್ತ ಅಭಿಮಾನಿಗಳಿಂದ ರಾಷ್ಟ್ರಧ್ವಜ ವಿತರಣೆಗೆ ಕಾರ್ಯ ಯೋಜನೆ ರೂಪಿಸಲಾಗಿದೆ. ನಗರ ಪ್ರದೇಶದಲ್ಲಿ ನಗರಸಭೆ ಅಧಿಕಾರಿಗಳಿಗೆ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ರಾಷ್ಟ್ರಧ್ವಜವನ್ನು ವಿತರಿಸುವ ಜವಾಬ್ದಾರಿ ನೀಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಯೊಬ್ಬರಿಗೂ ಗೌರವಯುತವಾಗಿ ರಾಷ್ಟ್ರಧ್ವಜ ತಲುಪಿಸಬೇಕು ಎಂದರು.

ಗ್ರಾಮೀಣ ಜನರಿಗೆ ರಾಷ್ಟ್ರಧ್ವಜ ಸಂಹಿತೆಯ ಕುರಿತು ಅರಿವು ಮೂಡಿಸಬೇಕು. ಜೊತೆಗೆ ಧ್ವಜಾರೋಹಣ ಹಾಗೂ ಧ್ವಜಾ ಅವರೋಹಣ ಸಂದರ್ಭದಲ್ಲಿ ಯಾವುದೇ ಅಚಾತುರ್ಯ ಘಟನೆಗಳು ಜರುಗದಂತೆ ಅಚ್ಚುಕಟ್ಟಾಗಿ ಸ್ವಾತಂತ್ರ್ಯೊತ್ಸವ ಆಚರಿಸಿ ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ನಿತಿನ್ ಪಿಕಳೆ, ಉಪಾಧ್ಯಕ್ಷರಾದ ಪ್ರಕಾಶ ನಾಯ್ಕ, ತಹಶಿಲ್ದಾರರಾದ ಎನ್.ಎಫ್. ನೋರೊನಾ, ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಾಲಪ್ಪನವರ ಆನಂದಕುಮಾರ, ನಗರಸಭೆ ಆಯುಕ್ತರಾದ ಆರ್.ಪಿ. ನಾಯ್ಕ್, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ್ ನಾಯ್ಕ್, ಎಲ್ಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಲೂಕಾ ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!