ಆರೋಗ್ಯದಾಯಕ ಜೀವನಕ್ಕೆ ಮಾನಸಿಕ ಆರೋಗ್ಯ ಅಗತ್ಯ: ನಿಶ್ಚಿತಾ ಬರ್ಕೆ
ಉಜಿರೆ ಜುಲೈ 30, 2022: ಮನಃಶಾಸ್ತ್ರ ಮತ್ತು ಮಾನಸಿಕ ಆರೋಗ್ಯ ಒಂದಕ್ಕೊಂದು ಪೂರಕವಾಗಿದೆ ಎಂದು ಆಪ್ತ ಸಮಾಲೋಚಕಿ ನಿಶ್ಚಿತಾ ಬರ್ಕೆ ಹೇಳಿದರು.
ಉಜಿರೆಯ ಪ್ರಕೃತಿ ಚಿಕಿತ್ಸಾಲಯ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಸ್ನಾತಕೋತ್ತರ ಮನಃಶಾಸ್ತ್ರ ಮತ್ತು ಸಂಶೋಧನಾ ವಿಭಾಗವು ಶನಿವಾರ ಆಯೋಜಿಸಿದ್ದ ‘ ಮೆಂಟಲ್ ಹೆಲ್ತ್: ಅ ಗ್ಲೋಬಲ್ ಕನ್ಸರ್ನ್ ಆಂ್ಯಡ್ ಕನ್ವಿಕ್ಷನ್’ ಶೀರ್ಷಿಕೆಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಆರೋಗ್ಯದಾಯಕ ಜೀವನ ನಡೆಸಬೇಕೆಂದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಮಹತ್ವದ ಪಾತ್ರ ವಹಿಸುತ್ತದೆ. ಮಾನವನ ನಡುವಳಿಕೆ ಮತ್ತು ಭಾವನೆಯ ನಿಯಂತ್ರಣ ಮನಃಶಾಸ್ತ್ರದ ಅಧ್ಯಯನದಿಂದ ಸಾಧ್ಯ ಎಂದು ನುಡಿದರು.
ಮನಃಶಾಸ್ತ್ರ ವಿಭಾಗದಲ್ಲಿನ ಉದ್ಯೋಗಾವಕಾಶಗಳ ಕುರಿತು ಹೇಳಿದ ಅವರು ಕಲಿಕೆಯ ಹಂತದಲ್ಲಿಯೇ ಉತ್ಸಾಹದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್.ಉದಯಚಂದ್ರ ಮಾತನಾಡಿ ಪುಸ್ತಕಗಳನ್ನು ಪ್ರಿತಿಯಿಂದ ಓದಿದರೆ ಅವು ನಿದ್ದೆ ತರಿಸುವುದಿಲ್ಲ. ಓದುವ ಹವ್ಯಾಸ ಮತ್ತು ತಿಳಿದುಕೊಳ್ಳುವ ಗುಣವನ್ನು ಪ್ರತಿಯೊಬ್ಬ ವಿದ್ಯಾರ್ಥಯೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಂದನಾ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ವಿದ್ಯಾರ್ಥಿನಿ ರಾಜಶ್ರೀ ಎಸ್ ನಾಡಿಗ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಬಾಬು ಎನ್, ವಂದಿಸಿದರು.
ಕೃತಿಯನ್ನು ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ.ಮಹೇಶ್ ಬಾಬು ಎನ್, ಡಾ.ನವ್ಯಶ್ರೀ, ಅಶ್ವಿನಿ ಸಂಪಾದಿಸಿದ್ದಾರೆ.