ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗಳ ದಸ್ತಗಿರಿ: ಅಲೋಕ್ ಕುಮಾರ್

 ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗಳ ದಸ್ತಗಿರಿ: ಅಲೋಕ್ ಕುಮಾರ್
Share this post

ಮಂಗಳೂರು,ಜು.30, 2022: ದೊರೆತಿರುವ ಸೂಕ್ತ ಸಾಕ್ಷ್ಯಾಧಾರಗಳ ಆಧಾರದಲ್ಲಿ  ಆರೋಪಿಗಳನ್ನು ದಸ್ತಗಿರಿ ಮಾಡಲಾಗುತ್ತದೆ, ಯಾವುದೇ ಕಾರಣಕ್ಕೂ ತರಾತುರಿ ಮಾಡುವುದಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ ಅಲೋಕ್ ಕುಮಾರ್ ಅವರು ಹೇಳಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಗಳೂರಿನ ಸುರತ್ಕಲ್‍ನ ಮಂಗಳಪೇಟೆಯ ಮುಹಮ್ಮದ್ ಫಾಝೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಪ್ರಕರಣದಲ್ಲಿ ಸಾಕ್ಷ್ಯಾಧಾರಗಳೊಂದಿಗೆ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಅದರ ಹೊರತು ಯಾವುದೇ ರೀತಿಯ ತರಾತುರಿಯಲ್ಲಿ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದರು.

ಅಹಿತಕರ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ಗಾಳಿ ಸುದ್ದಿ, ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಹಾಗೂ ಹೇಳಿಕೆಗಳನ್ನು ದಾಖಲಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಪೆÇಲೀಸ್ ಅಧಿಕಾರಿಗಳಿಗೆ ಸೂಚಿಸಿದ ಅವರು,  ದಕ್ಷಿಣ ಕನ್ನಡ ಸೂಕ್ಷ್ಮ ಜಿಲ್ಲೆಯಾಗಿದೆ, ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ, ಅದನ್ನು ಮತ್ತಷ್ಟು ಬಲಪಡಿಸುವಂತೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೀಟ್ ಸಮಿತಿ, ಮೊಹಲ್ಲಾ ಸಮಿತಿಯಂತೆಯೇ ಯುವಕರ ಸಮಿತಿಗಳನ್ನು ರಚಿಸುವಂತೆ ಸಲಹೆ ನೀಡಿದ ಅವರು, ಈ ಸಮಿತಿಗಳು ನಿರಂತರವಾಗಿ ಸಭೆ ನಡೆಸಬೇಕು,  ಅದೇ ರೀತಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಶಾಂತಿ ಸಭೆಗಳಿಗೆ ನಾಗರೀಕರು ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಅಹಿತಕರ ಘಟನೆಗಳ ಹಿನ್ನಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗುಪ್ತಚಾರ ವರದಿ ಆಧರಿಸಿ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಅಂಗಡಿ, ವಾಣಿಜ್ಯ ಸಂಕಿರ್ಣ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇತರೆ ವ್ಯವಹಾರವನ್ನು ಬಂದ್ ಮಾಡಲಾಗಿದೆ, ಯಾವುದೇ ಕಾರಣಕ್ಕೂ ಜಿಲ್ಲೆಯ ಯುವಕರು ಭಾವದ್ವೇಕಕ್ಕೆ ಒಳಗಾಗಬಾರದು, ಸುಶಿಕ್ಷಿತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ  ಫೆಸ್‍ಬುಕ್, ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಸುದ್ದಿಗಳನ್ನು ತಿಳಿಯುವ ಮುನ್ನ ಅದರಲ್ಲಿನ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು, ಮುಖ್ಯವಾಗಿ ಹಿರಿಯರು ತಮ್ಮ ಪರಿಸರ ಹಾಗೂ ಸಮುದಾಯದಲ್ಲಿ ಯುವಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.  

ಯಾವುದೇ ಕಾರಣಕ್ಕೂ ನಾಗರೀಕರು ಕಾನೂನು ಹಾಗೂ ಆಯುಧಗಳನ್ನು ಕೈಗೆ ತೆಗೆದುಕೊಳ್ಳಬಾರದು, ಜಿಲ್ಲೆಯ ಯುಕವರಿಗೆ ವಿವಿಧ ರಂಗಗಳಲ್ಲಿ ಉದ್ಯೋಗ ಒದಗಿಸಲು ದೀರ್ಘಕಾಲಿನ ಯೋಜನೆಗಳನ್ನು ಕೈಗೊಳ್ಳಲಾಗಿದೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಬೀದಿ ದೀಪಗಳು ಹಾಗೂ ಸಿಸಿಟಿವಿಗಳನ್ನು ದುರಸ್ತಿಪಡಿಸುವ ಕ್ರಮವಹಿಸಲಾಗುವುದು, ನಗರ ಹಾಗೂ ಗ್ರಾಮಗಳಲ್ಲಿ ಯಾವುದೇ ಪ್ರವೇಶ ಹಾಗೂ ನಿರ್ಗಮನವನ್ನು ಗುರುತಿಸಲು ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ದೇವಜ್ಯೋತಿ ರೇ ಮಾತನಾಡಿ, ಪ್ರತಿ ತಿಂಗಳು ಶಾಂತಿ ಸಮಿತಿ ಸಭೆಯನ್ನು ನಡೆಸಲಾಗುತ್ತಿದೆ, ಬೀಟ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು, ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ದಕ್ಷತೆ ತರುವ ದೃಷ್ಟಿಯಿಂದ ಪೆÇಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.

ನಗರ ಪೆÇಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುವ ಗಾಳಿ ಸುದ್ದಿ ಅಥವಾ ರೂಮರ್ಸ್‍ಗಳಿಗೆ ಕಿವಿಕೊಡದಂತೆ ಈಗಾಗಲೇ ಸಾರ್ವಜನಿಕರಿಗೆ ಕರೆ ನೀಡಲಾಗಿದೆ. ಇತ್ತೀಚಿಗೆ ನಡೆದ ಅವಘಡಗಳಲ್ಲಿ ಮೃತಪಟ್ಟವರ  ಮನೆಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವಂತೆ ಸೂಚಿಸಲಾಗಿದೆ, ಅದರೊಂದಿಗೆ ಅಲ್ಲಿನ ಸ್ಥಳೀಯ ಕಂದಾಯ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡುವಂತೆ ತಿಳಿಸಲಾಗಿದೆ, ಸಂಜೆ 6 ಗಂಟೆಗೆ ಅಂಗಡಿ ಮುಂಗಟ್ಟುಗಳು ಬಂದ್ ಅಗಲಿರುವ ಹಿನ್ನೆಲೆಯಲ್ಲಿ ತುರ್ತು ಸೇವೆಗಳಿಗೆ ಯಾವುದೇ ರೀತಿಯ ಅಡೆ-ತಡೆ ಮಾಡುತ್ತಿಲ್ಲ, ಕೇರಳ ಹಾಗೂ ಉಡುಪಿಯಿಂದ ಬರುವ ಪ್ರಯಾಣಿಕರು ಬಸ್‍ಗಳು ಸಂಚಾರವನ್ನು ನಿಲ್ಲಿಸಿಲ್ಲ ಎಂದವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವನೆ ಮಾತನಾಡಿ, ಮಳೆ ಹಾಗೂ ಗಾಳಿಗೆ ಸಿಸಿಟಿವಿಗಳು ಹಾಳಾಗಿರುವುದರಿಂದ ದುರಸ್ತಿಪಡಿಸಲಾಗುತ್ತಿದೆ, ಕೊಲೆ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳ ರೀತಿ ತನಿಖೆ ತೀವ್ರವಾಗಿ ನಡೆಯುತ್ತಿದೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.

ಸಭೆಯ ಆರಂಭದಲ್ಲಿ ಮಾತನಾಡಿದ ಹಲವು ನಾಗರೀಕರು, ಜಿಲ್ಲೆಯಲ್ಲಿ ಹಿತಕರ ಘಟನೆಗಳು ಸಂಭವಿಸಿದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಚಾರಕ್ಕೆ ತಡೆಯೊಡಬೇಕು ಹಾಗೂ ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಂತಹ ಅವಘಡಗಳಾದಾಗ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಹಾಗೂ ಕೆಲವು ದಿನಪತ್ರಿಕೆಗಳಲ್ಲಿ ನಾಗರೀಕರನ್ನು ಕೆರಳಿಸುವಂತೆ ಬಿತ್ತರಿಸುವ ಸುದ್ದಿಗಳಿಗೆ ತಡೆಒಡ್ಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಟ್ಯಾನ್ಲಿ, ಮಂಜುಳಾ ನಾಯಕ್, ರಕ್ಷಿತ್ ಸುವರ್ಣ, ಸೌಹಾನ್ ಎಸ್.ಕೆ, ಸದಾಶಿವ, ಲಾರೆನ್ಸ್ ಡಿಸೋಜ, ನಾಸೀರ್, ವಿಶ್ವಾಸ್, ಜಯಶೀಲ, ಮಣಿಕಂಠ, ಅಶೋಕ್, ಶಿಶಿತ್, ಸುಶೀಲ್, ವಿಶ್ವಾಸ್, ಪ್ರಕಾಶ್, ಜೆ.ಆರ್. ಲೊಬೋ ಮಿಥುನ್ ರೈ ಸೇರಿದಂತೆ ಹಲವಾರು ಮುಖಂಡರು ಹಾಗೂ ಗಣ್ಯರು ಸಭೆಯಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!