ಕಾಮಗಾರಿಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಜು.25, 2022: ಕೇಂದ್ರ ಸರ್ಕಾರದ ಬ್ಲೂ ಫ್ಲಾಗ್ ಯೋಜನೆಯಡಿ ಆಯ್ಕೆಯಾಗಿರುವ ತಣ್ಣೀರು ಬಾವಿ ಬೀಚ್ನಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ಬಿವಿಜಿ ಇಂಡಿಯಾ ಲಿಮಿಟೆಡ್ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ವಹಿಸುವ ಕಾಮಗಾರಿಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜು.25ರ ಸೋಮವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬ್ಲೂ ಫ್ಲಾಗ್ ಯೋಜನೆಯ ಕಾಮಗಾರಿಗಳ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಣ್ಣೀರು ಬಾವಿ ಬೀಚ್ನಲ್ಲಿ ಬಿವಿಜಿ ಇಂಡಿಯಾ ಲಿಮಿಟೆಡ್ನವರು ನಿರ್ಮಿಸಲಿರುವ ಆಹಾರ ಮಳಿಗೆಗಳು, ಶೌಚಾಲಯಗಳು, ವಾಹನಗಳ ಪಾರ್ಕಿಂಗ್ ಸೇರಿದಂತೆ ಬ್ಲೂ ಫ್ಲಾಗ್ ಯೋಜನೆಯಡಿ ನಿರ್ವಹಿಸುವ ಕಾಮಗಾರಿಗಳು ತಣ್ಣೀರು ಬಾವಿ ಬೀಚ್ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳು ಒಂದೇ ಸ್ಥಳದಲ್ಲಿ ಹಾಗೂ ಒಂದೇ ಕಾಮಗಾರಿಗಳೂ ಪುನರಾವರ್ತನೆಗಳಾಗದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಸ್ಮಾರ್ಟ್ ಸಿಟಿ ಹಾಗೂ ಬಿವಿಜಿ ಇಂಡಿಯಾ ಲಿಮಿಟೆಡ್ನವರು ಪರಸ್ಪರ ಚರ್ಚಿಸಿ ತಣ್ಣೀರು ಬಾವಿ ಬೀಚಿನಲ್ಲಿ ವ್ಯವಸ್ಥಿತವಾಗಿ ಕಾಮಗಾರಿಗಳನ್ನು ನಿರ್ವಹಿಸುವಂತೆ ಸೂಚಿಸಿದರು.
ಬಿವಿಜಿ ಇಂಡಿಯಾ ಲಿಮಿಟೆಡ್ ತಣ್ಣೀರು ಬಾವಿ ಬೀಚಿನಲ್ಲಿ ಕೈಗೊಳ್ಳದ ಇತರೆ ಅಗತ್ಯ ಕಾಮಗಾರಿಗಳಾದ ಅಮ್ಯೂಸ್ಮೆಂಟ್ ಪಾರ್ಕ್, ಮಕ್ಕಳ ಆಟಕ್ಕೆ ಉದ್ಯಾನವನ ಸೇರಿದಂತೆ ಇತರೆ ಕಾಮಗಾರಿಗಳನ್ನು ನಿರ್ವಹಿಸುವಂತೆ ಅವರು ತಿಳಿಸಿದರು.
ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರಾ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ ಸೇರಿದಂತೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಬಿವಿಜಿ ಇಂಡಿಯಾ ಲಿಮಿಟೆಡ್ ಡಿಜಿಎಂ ಪ್ರಕಾಶ್ ದೇಶಪಾಂಡೆ ಹಾಗೂ ಸಂಬಂಧಿಸಿದವರು ಸಭೆಯಲ್ಲಿದ್ದರು.