ಸಿ ಆರ್ ಝೆಡ್ ವಿಸ್ತರಣೆಯಿಂದ ಕರಾವಳಿ ಪ್ರದೇಶದ ಅಭಿವೃದ್ಧಿ: ಬಸವರಾಜ ಬೊಮ್ಮಾಯಿ
ನವೆದೆಹಲಿ, ಜುಲೈ 25, 2022: ರಾಜ್ಯದ ಕರಾವಳಿ ಪ್ರದೇಶಗಳಿಗೂ ಕರಾವಳಿ ನಿಯಂತ್ರಣಾ ವಲಯ(ಸಿ ಆರ್ ಝೆಡ್) ವಿಸ್ತರಣೆ ಪಡೆಯಲು ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದ್ದು, ಕರಾವಳಿ ಪ್ರದೇಶ ಅಭಿವೃದ್ಧಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಕರಾವಳಿ ನಿಯಂತ್ರಣಾ ವಲಯ (ಸಿಆರ್ಝೆಡ್) ವಿಸ್ತರಣೆಗೆ ಅನುಮತಿ ನೀಡಿರುವುದರಿಂದ ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಿದೆ. ಇದೇ ರೀತಿ ರಾಜ್ಯದ ಕರಾವಳಿ ಪ್ರದೇಶಗಳಿಗೂ ಸಿ ಆರ್ ಝೆಡ್ ವಿಸ್ತರಣೆ ಪಡೆಯಲು ಗಂಭೀರ ಪ್ರಯತ್ನಗಳನ್ನು ಮಾಡಲಾಗಿದ್ದು, ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದೆ. ಇದರಿಂದ ಕರ್ನಾಟಕದ 330 ಕಿ.ಮೀ. ಉದ್ದದ ಕರಾವಳಿ ಪ್ರದೇಶದ ಅಭಿವೃದ್ಧಿಯ ಜೊತೆ, ಆರ್ಥಿಕತೆ, ಪ್ರವಾಸೋದ್ಯ, ಮೀನುಗಾರಿಕೆ ಸೇರಿದಂತೆ ಕರಾವಳಿ ಭಾಗದ ಚಟುವಟಿಕೆಗಳು ಅಭಿವೃದ್ಧಿಗೊಳ್ಳಲಿದೆ . ರಾಜ್ಯದ ಯೋಜನೆಗಳಿಗೆ ಶೀಘ್ರಗತಿಯಲ್ಲಿ ಮಂಜೂರಾತಿ ಪಡೆಯಲು ಕೇಂದ್ರ ಸಚಿವರೊಂದಿಗೆ ಖುದ್ದು ನಾನು ಭೇಟಿಯಾಗುತ್ತಿದ್ದೇನೆ ಎಂದರು.
ರಿಂಗ್ ರಸ್ತೆ ನಿರ್ಮಾಣಕ್ಕೆ ಒತ್ತು :
ಕೇಂದ್ರ ಸಾರಿಗೆ ಸಚಿವರ ಜೊತೆ ಚರ್ಚಿಸಲಾಗಿದ್ದು, 5 ರಿಂಗ್ ರಸ್ತೆಗಳ ಬಗ್ಗೆ ಚರ್ಚಿಸಲಾಗಿದೆ. ಜಿಎಸ್ ಟಿ ಮನ್ನಾ ಸೇರಿದಂತೆ ಕೆಲವು ರಿಯಾಯಿತಿಗಳನ್ನು ಕೇಂದ್ರ ಸರ್ಕಾರ ನೀಡಿದ್ದು, ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಾಯಚೂರು, ಕೊಪ್ಪಳ, ಗುಲ್ಬರ್ಗಾ, ಬೆಳಗಾವಿ, ಗದಗ , ಈ ಐದು ಪ್ರದೇಶಗಳಲ್ಲಿ ರಿಂಗ್ ರಸ್ತೆಗಳನ್ನು ನಿರ್ಮಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ರೈಲ್ವೆ ಮೇಲ್ಸೆತುವೆಗಳನ್ನು 24 ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದರು.
ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರದ ತಾತ್ವಿಕ ಒಪ್ಪಿಗೆ :
ಕೇಂದ್ರ ಜವಳಿ ಹಾಗೂ ವಾಣಿಜ್ಯ ಕೈಗಾರಿಕಾ ಸಚಿವರನ್ನು ಭೇಟಿಯಾಗಿ, ರಾಜ್ಯದಲ್ಲಿ ಎರಡು ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಬಗ್ಗೆ ಚರ್ಚಿಸಲಾಗಿದೆ. ಬಿಜಾಪುರ ಹಾಗೂ ಗುಲ್ಬರ್ಗಾ ದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ತಾತ್ವಿಕ ಒಪ್ಪಿಗೆಯನ್ನು ನೀಡಿದ್ದಾರೆ. ಇದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ ಎಂದರು.
3 ಮರೀನಾಗಳಲ್ಲಿ ಪ್ರವಾಸೋದ್ಯಮಚಟುವಟಿಕೆಗಾಗಿ ಕಾರ್ಯಸಾಧ್ಯತಾ ನಿಧಿ :
ಕೇಂದ್ರ ಬಂದರು ಮತ್ತು ಜಲಸಾರಿಗೆ ಸಚಿವರನ್ನು ಭೇಟಿಯಾಗಿ ರಾಜ್ಯದ ಹಲವಾರು ಬಾಕಿ ಇದ್ದ ಪ್ರಸ್ತಾವನೆಗಳ ಮಂಜೂರಾತಿ ಬಗ್ಗೆ ಚರ್ಚಿಸಲಾಗಿದೆ. ಸುಮಾರು 1800 ಕೋಟಿ ರೂ.ಗಳ ಒಟ್ಟು 27 ಯೋಜನೆಗಳನ್ನು ಸಾಗರಮಾಲಾ ಯೋಜನೆಯಡಿ ಪ್ರಸ್ತಾವನೆಗಳ ಪೈಕಿ 10 ಯೋಜನೆಗಳಿಗೆ ಈಗಾಗಲೇ ಮಂಜೂರಾತಿಯನ್ನು ನೀಡಲಾಗಿದೆ. ಇನ್ನು 10 ಯೋಜನೆಗಳಿಗೆ ಸ್ಪಷ್ಟೀಕರಣ ಕೇಳಲಾಗಿದ್ದು, ಅದನ್ನು ನೀಡಲಾಗಿದೆ. ಕೆಲವು ಪ್ರಸ್ತಾವನೆಗಳನ್ನು ಬದಲಾವಣೆ ಮಾಡಿ ಕಳುಹಿಸಲು ಸೂಚಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ 250 ಕೋಟಿ ರೂ.ಗಳ ಮಜಾಲಿ ಮೀನುಗಾರಿಕೆ ಬಂದರು, ಮ್ಯಾರಿಟೈಮ್ ಮೀನುಗಾರಿಕಾ ತರಬೇತಿ ಸಂಸ್ಥೆಯ ಉದ್ದೇಶ ಮತ್ತು ಹೆಸರು ಬದಲಾಯಿಸುವುದಾಗಿ ತಿಳಿಸಿದ್ದಾರೆ. ಕಾಳಿ ವಾಟರ್ ವೇ ಡಿಪಿಆರ್ ಕಳುಹಿಸಿದ ಕೂಡಲೇ ಮಂಜೂರಾತಿ ಆಗಲಿದೆ. ಅಂಗರಘಟ್ಟದಿಂದ ಮಣಿಪಾಲ ವಾಟರ್ ವೇ ಯೋಜನೆಯ ಸಮೀಕ್ಷೆ ಹಾಗೂ ಡಿಪಿಆರ್ ಸಿದ್ಧವಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪ್ರಸ್ತಾವನೆ ಮಂಜೂರಾತಿ ಮಾಡುವುದಾಗಿ ತಿಳಿಸಿದ್ದಾರೆ. ಬೈಂದೂರು, ಮಲ್ಪೆ ಹಾಗೂ ಮಂಗಳೂರು ಮರೀನಾಗಳಲ್ಲಿ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಕಾರ್ಯಸಾಧ್ಯತಾ ನಿಧಿಯನ್ನು ನೀಡಲಾಗುವುದು, ಪಿಪಿಪಿ ಮಾದರಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದು, ಅದರಂತೆ 8-10 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಗ್ಗೆ ತಜ್ಞರಿದ್ದರೆ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಸ್ತೂರಿ ರಂಗನ್ ವರದಿ : ಆಕ್ಷೇಪ ಸಲ್ಲಿಕೆ :
ಇಂದು ಸಂಜೆ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿಯಾಗುತ್ತಿದ್ದು, ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡುವ ಸಲುವಾಗಿ ಪರಿಸರ ಸಚಿವಾಲಯವು ನಿರ್ಣಯ ಮಾಡಿದ್ದನ್ನು ವಿರೋಧಿಸಿದ್ದೆವು. ಈಗ ಮತ್ತೆ ಹೊರಡಿಸುತ್ತಿರುವ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ನಿಯೋಗ ಹೋಗಬೇಕೆಂದು ನಿರ್ಣಯವಾಗಿದೆ. ಆ ಪ್ರಕಾರ ನಿಯೋಗ ಆಗಮಿಸಿದ್ದು, ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಲಾಗುವುದು ಎಂದರು.
ಕೆಂಪು ವಲಯದಲ್ಲಿ ಕೈಗಾರಿಕೆ ಗಳು ಬೇಡ ಎಂದು ನಾವು ಒಪ್ಪುತ್ತೇವೆ. ಕೆಲವು ವಿಚಾರಗಳಲ್ಲಿ ಜನಜೀವನಕ್ಕೂ ತೊಂದರೆಯಾಗುವ ವಿಚಾರಗಳಿರುವುದರಿಂದ ನಮ್ಮ ಆಕ್ಷೇಪವಿದೆ.ಪಶ್ಚಿಮ ಘಟ್ಟಗಳಲ್ಲಿ ವಿವರವಾದ ಸಮೀಕ್ಷೆಯಾಗಿಲ್ಲ. ಸ್ಯಾಟಿಲೈಟ್ ಸರ್ವೇಯಾಗಿದೆ. ಆದರೆ ವಾಸ್ತವಾಂಶ ಬೇರೆ ಇದೆ. ಮೇಲಿನಿಂದ ಹಸಿರು ಕಾಣುವುದು ತೋಟಗಳು. ಜನರೇ ಹಸಿರನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಜನಸಾಮಾನ್ಯರ ಜೀವನ ಮತ್ತು ನಿಸರ್ಗ ಹೊಂದಿಕೊಂಡು ಜೀವ ಸಂಕುಲವನ್ನು ಕಾಪಾಡಿಕೊಂಡು ಬಂದಿದೆ. ಹೀಗಾಗಿ ಅಲ್ಲಿಯ ಜನ ನಿಸರ್ಗದ ಮೇಲೆಯೇ ಅವಲಂಬಿತರಾಗಿದ್ದಾರೆ. ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಕೆಲವು ಆಕ್ಷೇಪಗಳಿವೆ. ಅದನ್ನು ಇಂದು ವ್ಯಕ್ತಪಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸರ್ಕಾರದ ಒಂದು ವರ್ಷ: ಜನೋತ್ಸವ
ಜುಲೈ 28 ಕ್ಕೆ ನನ್ನ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಹಾಗೂ ಬಿಜೆಪಿಯ ಮೂರು ವರ್ಷಗಳ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಒಂದು ವರ್ಷದ ಸಾಧನಾ ಸಮಾವೇಶ-ಜನೋತ್ಸವ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.