ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋಶಾಲೆ ಆರಂಭ: ಸಚಿವ ಪ್ರಭು ಚೌಹಾಣ್

 ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋಶಾಲೆ ಆರಂಭ: ಸಚಿವ  ಪ್ರಭು ಚೌಹಾಣ್
Share this post

ಮಂಗಳೂರು,ಜೂ.29, 2022: ಕೃಷಿ ಪ್ರಧಾನ ದೇಶ ಭಾರತದಲ್ಲಿ ಗೋವಿಗೆ ಪ್ರಮುಖ ಸ್ಥಾನವಿದ್ದು, ಅವುಗಳ ರಕ್ಷಣೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋಶಾಲೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ ಎಂದು ಪಶು ಸಂಗೋಪನಾ ಇಲಾಖೆಯ ಸಚಿವರಾದ ಪ್ರಭು ಬಿ ಚೌಹಾಣ್ ಅವರು ತಿಳಿಸಿದರು.

ಅವರು ಜೂ.29ರ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ ಮತ್ತು ರಾಮಕುಂಜ ಗ್ರಾಮ ಪಂಚಾಯತ್ ಸಹಯೋಗದಲ್ಲಿ ರಾಮಕುಂಜದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗೋಶಾಲೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮುಂದಿನ ಎರಡು ತಿಂಗಳೊಳಗೆ ಗೋಶಾಲೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಅದರ ಉದ್ಘಾಟನೆಗೆ ಆಹ್ವಾನಿಸಬೇಕೆಂದು ತಿಳಿಸಿದ ಸಚಿವರು, ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ, ಕಾಯ್ದೆಯಡಿ ಇದುವರೆಗೂ 15 ಸಾವಿರ ಹಸುಗಳನ್ನು ರಕ್ಷಿಸಲಾಗಿದ್ದು, 700ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ರಾಸುಗಳು ಕಸಾಯಿಖಾನೆ ಸೇರಬಾರದು, ಪ್ರಾಣಿ ರಕ್ಷಣೆ ಸರ್ಕಾರದ ಉದ್ದೇಶವಾಗಿದ್ದು ಗೋಹತ್ಯೆ ನಿಷೇಧ ಕಾನೂನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು ಪ್ರಾಣಿಗಳ ಮಾಲಿಕರು ಸಹಾಯವಾಣಿಗೆ ಕರೆ ಮಾಡಿದರೆ ಇಲಾಖೆ ವತಿಯಿಂದ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ, ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿದ್ದು ಶೇ.75% ಕ್ಕೂ ಹೆಚ್ಚಿನ ಪ್ರಕರಣಗಳಿಗೆ ಸ್ಥಳಕ್ಕೆ ತೆರಳಿ ಪ್ರಾಣಿಗಳಿಗೆ ಎದುರಾದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಪಶು ಸಂಜೀವಿನಿ ಆಂಬುಲೆನ್ಸ್ ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಕಾರ್ಯನಿರ್ವಹಿಸಲಿದೆ, 1962ಗೆ ಕರೆ ಮಾಡಿದರೆ, ಸ್ಥಳಕ್ಕೆ ಹೋಗಿ ಪಶುಗಳಿಗೆ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡುವರು, ಶೀಘ್ರದಲ್ಲೆಯೇ ಆತ್ಮನಿರ್ಭರ್ ಭಾರತದಡಿ ಸ್ವಾವಲಂಭಿ ಗೋಶಾಲೆಗಳನ್ನು ಪ್ರಾರಂಭಿಸಲಾಗುವುದು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಗೋಮಾತಾ ಸ್ವ-ಸಹಾಯ ಸಂಘವನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದರು.

ಶಾಸಕರಾದ ಸಂಜೀವ ಮಠಂದೂರು ಮಾತನಾಡಿ, ಗೋವು ಹಾಗೂ ಗೋಪಾಲಕರ ರಕ್ಷಣೆಗೆಗಾಗಿ ಸರ್ಕಾರದಿಂದ ಕಾನೂನು ಬಲಪಡಿಸುವ ಕೆಲಸವಾಗುತ್ತಿದೆ. ಸಾವಯವ ಕೃಷಿ-ಪರಂಪರೆ ಉಳಿಸುವ ಕೆಲಸ ಗೋವುಗಳಿಂದ ಆಗಬೇಕಿದೆ. ಆಡು, ಕುರಿ, ಮೇಕೆ, ಆಕಳುಗಳು ಆಕಸ್ಮಿಕವಾಗಿ ಸಾವೀಗಿಡಾದರೆ ಅನುಗ್ರಹ ಯೋಜನೆಯಡಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಪಶು ಸಂಗೋಪನಾ ಸಚಿವರು ತಮ್ಮ ಇಲಾಖೆಯಲ್ಲಿ ಸಾಕಷ್ಟು ಪರಿವರ್ತನೆಯ ಕೆಲಸ ಮಾಡಿದ್ದಾರೆ, ಸರ್ಕಾರದಲ್ಲಿ ಕೆಲವೊಂದು ಗಟ್ಟಿ ನಿರ್ಣಯ ಕೈಗೊಳ್ಳುವ ಮೂಲಕ ಗೋ ಸಂಸ್ಕøತಿಯನ್ನು ಉಳಿಸಲಾಗುತ್ತಿದೆ, ಮನುಷ್ಯರಂತೆಯೇ ಪ್ರಾಣಿಗಳಿಗೂ ಆಂಬುಲೆನ್ಸ್ ಸೇವೆ ಒದಗಿಸಿ ಪ್ರಾಣಿಗಳ ರಕ್ಷಣೆಗೆ ಅವರು ಮುಂದಾಗಿದ್ದಾರೆ. ಮುಂದಿನ ಐದಾರು ತಿಂಗಳಲ್ಲಿ ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭವಾಗಲಿದೆ, ಗೋಶಾಲೆಗಳಿಗಾಗಿಯೇ ಸರ್ಕಾರ ಐವತ್ತು ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ, ರಾಮಕುಂಜದಲ್ಲಿ ಮಾದರಿ ಗೋಶಾಲೆ ನಿರ್ಮಿಸುವಂತೆ ತಿಳಿಸಿದ ಅವರು, ಈ ಬಾರಿ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ 100 ನೂತನ ಗೋಶಾಲೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ, ಅವುಗಳನ್ನು ಪ್ರಾರಂಭಿಸಲಾಗುವುದು ಎಂದರು.

ಪುತ್ತೂರು ಸಹಾಯ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ಅನಂತ ಶಂಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ರಾಮಕುಂಜ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಾಲತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ. ಶ್ರೀನಿವಾಸ್ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಪ್ರಸನ್ನ ಕುಮಾರ್ ಸ್ವಾಗತಿಸಿದರು.

ಇದಕ್ಕೂ ಮುನ್ನ ಸಚಿವರು ಗೋಪೂಜೆ ನೆರವೇರಿಸಿದರು. ಪಶುವೈದ್ಯಕೀಯ ಕಾಲೇಜು ಹಾಗೂ ರಾಮಕುಂಜದಲ್ಲಿರುವ ಪಶು ಸಂವರ್ಧನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!