ಜೂ. 25ರಂದು ಜಿಲ್ಲೆಯ 38 ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಐಐಎಂ ಕೇಂದ್ರಕ್ಕೆ ಪ್ರವಾಸ
ಕಾರವಾರ, ಜೂ 24, 2022: ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿನ ಕಲಿಕಾ ಹಾಗೂ ಬೋಧನಾ ಚಟುವಟಿಕೆಗಳನ್ನು ಜಿಲ್ಲೆಯ ಮಕ್ಕಳಿಗೆ ಪರಿಚಯಿಸುವ ಹಾಗೂ ಉನ್ನತ ಕಲಿಕೆಗೆ ಉತ್ತೇಜಿಸುವ ಉದ್ದೇಶದಿಂದ ಜ್ಞಾನ ದರ್ಶನ ಕಾರ್ಯಕ್ರಮದಡಿ ಜೂನ್ 25 ರಂದು ಜಿಲ್ಲೆಯ ಪರಿಶಿಷ್ಟ ಜಾತಿ & ಪಂಗಡದ 38 ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಐಐಎಂ ಕೇಂದ್ರಕ್ಕೆ ತೆರಳಲಿದ್ದಾರೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್‍ನ ಸಿಇಒ ಕಚೇರಿಯಲ್ಲಿ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳೊಂದಿಗೆ ಬುಧವಾರ ವಿಡಿಯೋ ಸಂವಾದ ಮೂಲಕ ಚರ್ಚಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜ್ಞಾನ ದರ್ಶನ ಕಾರ್ಯಕ್ರಮದಡಿ ಜೂನ್ 11ರಂದು ಜಿಲ್ಲೆಯಾದ್ಯಂತ 1700 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 38 ವಿದ್ಯಾರ್ಥಿಗಳು ಜ್ಞಾನ ದರ್ಶನ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಆಯ್ಕೆಯಾದ ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಐಐಎಂ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಈ ಮಕ್ಕಳಿಗೆ ಅಲ್ಲಿಯ ಕಲಿಕಾ ಹಾಗೂ ಬೋಧನಾ ಚಟುವಟಿಕೆಗಳನ್ನು ಪರಿಚಯಿಸಲಾಗುತ್ತದೆ. ಜೊತೆಗೆ ಉನ್ನತ ಜ್ಞಾನಕ್ಕಾಗಿ ಪ್ರತಿಷ್ಠಿತ ಕೇಂದ್ರಗಳಿಗೆ ಈ ಮಕ್ಕಳೂ ಕೂಡಾ ಸೇರುವಂತೆ ಪ್ರೇರೇಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಜಿಲ್ಲೆಯಲ್ಲಿ ಜ್ಞಾನ ದರ್ಶನ ಶೀರ್ಷಿಕೆಯಡಿಯಲ್ಲಿ ಎಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಯಾಣಕ್ಕೆ ಜೂನ್ 25ರಂದು ಬೆಳಿಗ್ಗೆ 10ಕ್ಕೆ ಕಾರವಾರದಲ್ಲಿ ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಲಾಗುವುದು ಎಂದರು.
ಈ ಕಲಿಕಾ ಪ್ರವಾಸ ಮೇಲ್ವಿಚಾರಣೆಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೆಶಕ ಅಜ್ಜಪ್ಪ ಸೋಗಲದ್ ಅವರಿಗೆ ವಹಿಸಲಾಗಿದೆ.
ಹಿಂಜರಿಕೆಯಿಲ್ಲದೇ ಉತ್ತಮ ಪ್ರಶ್ನೆ ಕೇಳಲು ಸೂಚನೆ:
ಉನ್ನತ ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ಉತ್ತಮ ಪ್ರಶ್ನೆಗಳನ್ನು ಕೇಳಬೇಕು. ಯಾವುದನ್ನು ಓದಿದರೆ ಯಾವ ಪದವಿ ಹಾಗೂ ಕೆಲಸ ಪಡೆಯಬಹುದು. ಉನ್ನತ ವ್ಯಾಸಂಗ ಹೇಗೆಲ್ಲ ಮುಂದುವರಿಸಬಹುದು ಎಂಬ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎಂಬ ಕೆಲವು ಸೂಚನೆಗಳನ್ನು ಜಿಪಂ ಸಿಇಒ ಪ್ರಿಯಾಂಗಾ ಎಂ ಅವರು ಮಕ್ಕಳಿಗೆ ನೀಡಿದರು.