ಫಸಲ್ ಬಿಮಾ ಯೋಜನೆ: ಆಗಸ್ಟ್ 16 ರೊಳಗೆ ನೋಂದಾಯಿಸಲು ರೈತರಿಗೆ ಕರೆ

 ಫಸಲ್ ಬಿಮಾ ಯೋಜನೆ: ಆಗಸ್ಟ್ 16 ರೊಳಗೆ ನೋಂದಾಯಿಸಲು ರೈತರಿಗೆ ಕರೆ
Share this post

ಮಂಗಳೂರು,ಜೂ.08, 2022: 2022-23ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತ ನೋಂದಾಯಿತ ಬೆಳೆಯಾಗಿದ್ದು, ರೈತರು ತಮ್ಮ ಹೆಸರು ನೋಂದಾಯಿಸಲು ಕೋರಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲು ಜಿಲ್ಲೆಗೆ ಯುನಿವರ್ಸಲ್ ಸೋಂಪೊ ಇನ್ಶುರೆನ್ಸ್ ಕಂಪನಿಯನ್ನು ನಿಗದಿ ಮಾಡಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಯಾವುದೇ ಪ್ರಕೃತಿ ವಿಕೋಪಗಳಿಂದ, ಹವಾಮಾನ ವೈಪರೀತ್ಯದಿಂದಾಗಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾಮೊತ್ತದ ಗರಿಷ್ಠ ಶೇ.25ರ ಭಾಗವನ್ನು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆವಿಮಾ ನಷ್ಟ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು.

ಅಲ್ಲದೇ ಕಟಾವಿನ ನಂತರದ ಸಮಯದಲ್ಲಿ ಬೆಳೆ ಒಣಗಿಸಲು ಬಿಟ್ಟ ಸಂದರ್ಭದಲ್ಲಿ 2 ವಾರದೊಳಗೆ ಅಕಾಲಿಕ ಮಳೆ, ಚಂಡಮಾರುತ ಸಹಿತ ಮಳೆಯಿಂದಾಗಿ ಕಟಾವು ಮಾಡಲಾದ ಬೆಳೆಯು ನಾಶವಾದರೆ ವಿಮಾ ಸಂಸ್ಥೆಯು ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸುತ್ತದೆ. ಪ್ರಕೃತಿ ವಿಕೋಪಗಳಾದ ಭೂಕುಸಿತ, ಬೆಳೆ ಮುಳುಗಡೆ, ಆಲಿಕಲ್ಲು ಮಳೆಯಿಂದಾಗುವ ನಷ್ಟವನ್ನು ವೈಯಕ್ತಿಕ ಕ್ಷೇತ್ರವಾರು ನಿರ್ಧರಿಸಿ ರೈತರಿಗೆ ಬೆಳೆವಿಮಾ ನಷ್ಟ ಪರಿಹಾರ ನೀಡಲಾಗುವುದು.

ಯೋಜನೆಯಡಿ ನೋಂದಾಯಿಸಲು 2022ರ ಆಗಸ್ಟ್ 16 ರಂದು ಕೊನೆಯ ದಿನ. ವಿಮಾ ಕಂತು ಒಂದು ಎಕರೆಗೆ 440 ರೂ.ಗಳಂತೆ ಒಟ್ಟು ವಿಮಾ ಮೊತ್ತ ಎಕರೆಗೆ 22,000 ರೂ.ಗಳಾಗಿವೆ. ಆಸಕ್ತರು ಹತ್ತಿರದ ಬ್ಯಾಂಕುಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾಕಂತಿನ ಮೊತ್ತವನ್ನು ಪಾವತಿಸಬೇಕು.

ವಿಮೆ ಮಾಡಿಸಿದ ರೈತರು ಬೆಳೆ ನಷ್ಟದ ಬಗ್ಗೆ ಸಂಬಂಧಿಸಿದ ಹಣಕಾಸು ಸಂಸ್ಥೆ ಅಥವಾ ವಿಮಾಸಂಸ್ಥೆ ಕಚೇರಿಗಳಿಗೆ ನಷ್ಟ ಸಂಭವಿಸಿದ 72 ಗಂಟೆಯೊಳಗೆ ವಿಮೆ ಮಾಡಿಸಲಾದ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣ ತಿಳಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!