ಮಾತೃವಂದನಾ ಯೋಜನೆ: ಪಟ್ಟಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

 ಮಾತೃವಂದನಾ ಯೋಜನೆ: ಪಟ್ಟಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು,ಜೂ.06, 2022: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಸವಲತ್ತು ಪಡೆದ ಹಾಗೂ ಪಡೆಯದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್, ಪಾರ್ಸಿ ಇತರೆ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಅಂಜನಪ್ಪ ಅವರಿಗೆ ತಾಕೀತು ಮಾಡಿದರು.  

ಅವರು ಜೂ.6ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಈ ಮಾಹಿತಿ ಪಡೆದು, ತಾಲ್ಲೂಕುವಾರು ಗರ್ಭಿಣಿಯರನ್ನು ಸಂಪರ್ಕಿಸಿ, ಮಾತೃವಂದನಾ ಯೋಜನೆಯ ಸದುಪಯೋಗ ಪಡೆದಿರುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಶಾಲೆಯಿಂದ ಹೊರಗುಳಿದ ಪ್ರತಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತರ ಇಲಾಖೆಯ ಯೋಜನೆಗಳ ಮಾಹಿತಿ ನೀಡಿ ಅಂತಹ ಮಕ್ಕಳ ಪೋಷಕರ ಮನವೊಲಿಸಿ ಆ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ಮಕ್ಕಳ ಅಂಕಿಅಂಶಗಳನ್ನು ಸಂಗ್ರಹಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ವಾಸ ಮಾಡುವ  ಸ್ಥಳಗಳಲ್ಲಿ ಸ್ಥಳೀಯ ಅಲ್ಪಸಂಖ್ಯಾತ ಸಿಬ್ಬಂದಿಗಳನ್ನು ನೇಮಿಸಬೇಕು, ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಯೋಜನೆಗಳ ಅರ್ಜಿ ಪ್ರಕ್ರಿಯೆಯು ಆರಂಭಗೊಂಡಿದೆ, ಯೋಜನೆಗಳ ವ್ಯಾಪಕ ಪ್ರಚಾರ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಅದರ ಲಾಭ ತಲುಪುವಂತೆ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ವಸತಿ ರಹಿತ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಅವರಿಗೆ ಸೂಕ್ತ ವಸತಿ ಯೋಜನೆಯನ್ನು ಕಲ್ಪಿಸಿಕೊಡಬೇಕು, ಮುಖ್ಯವಾಗಿ ಜಿಲ್ಲೆಯ ಅಲ್ಪಸಂಖ್ಯಾತರ ಏಳಿಗೆಗೆ ಸಂಬಂಧಿಸಿದಂತೆ ಎಲ್ಲಾ ಯೋಜನೆಗಳೂ ಪ್ರತಿ ಫಲಾನುಭವಿಯನ್ನೂ ತಲುಪುವಂತೆ ಗುರಿ ನಿಗದಿಪಡಿಸಿ, ನಿಗದಿತ ಕಾಲಾವಧಿಯಲ್ಲಿ ಆ ಗುರಿಯನ್ನು ಸಾಧಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪಭೋವಿ, ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ ಅಧಿಕ್ಷಕ ವೀರಭದ್ರಪ್ಪ, ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್ ಆರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!