ಬೆಳೆ ವಿಮೆ ಅನುಷ್ಠಾನ
ಮಂಗಳೂರು,ಏ.22, 2022:– ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮವನ್ನು 2022ರ ಮುಂಗಾರು ಹಂಗಾಮಿಗೆ ಅನ್ವಯಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಠಾನ ಗೊಳಿಸಲು ಅಧಿಸೂಚಿಸಲಾಗಿದೆ.
2022ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಜೂನ್ 30 ಅಂತಿಮ ದಿನವಾಗಿದ್ದು ಈ ಯೋಜನೆಯು ಅಧಿಸೂಚಿತ ಬೆಳೆಗಳಿಗೆ ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರಿ ಬ್ಯಾಂಕ್ ಗಳಿಂದ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಐಚ್ಚಿಕವಾಗಿರುತ್ತದೆ. ಈ ಯೋಜನೆಯಡಿ ತೋಟಗಾರಿಕೆ ರೈತರು ಅಧಿಸೂಚಿತ ಬೆಳೆಗಳಿಗೆ ಸಂಬಂಧಿಸಿ ಸಾಲ ಪಡೆದುಕೊಂಡಿರುವ ಬ್ಯಾಂಕ್‍ಗಳ ಮೂಲಕ ಹಾಗೂ ಸಾಲ ಪಡೆಯದಿರುವ ರೈತರು ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್ ಗಳ ಮೂಲಕ ವಿಮಾ ಕಂತುಗಳನ್ನು ಪಾವತಿಸಿ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
- ಅಡಿಕೆ ಬೆಳೆಗೆ ಪ್ರತೀ ಹೆಕ್ಟೆರ್‍ಗೆ ವಿಮಾ ಮೊತ್ತ 12,8000 ರೂ.ಗಳಲ್ಲಿ, ರೈತರು ಪಾವತಿಸಬೇಕಾದ ವಿಮಾ ಕಂತು 6,400 ರೂ.ಗಳು
- ಕರಿಮೆಣಸು ಪ್ರತೀ ಹೆಕ್ಟೆರ್‍ಗೆ ವಿಮಾ ಮೊತ್ತ 47,700 ರೂ.ಗಳಲ್ಲಿ ರೈತರು ಪಾವತಿಸಬೇಕಾದ ವಿಮಾಕಂತು 2,350 ರೂ.ಗಳು.
ಈ ಯೋಜನೆಯಡಿ 2022ರ ಮುಂಗಾರು ಹಂಗಾಮಿನಲ್ಲಿ ಸ್ಥಳೀಯ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಮೇಘಸ್ಫೋಟದಿಂದ ಬೆಳೆನಷ್ಟ ಸಂಭವಿಸಿದಲ್ಲಿ ಬೆಳೆವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಹಾನಿ ಸಂಭವಿಸಿದ 72 ಗಂಟೆಯೊಳಗೆ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳನ್ನು ಲಿಖಿತವಾಗಿ ನೀಡಬೇಕು. ಇಂತಹ ಸಂಧರ್ಭದಲ್ಲಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಹಯೊಗದೊಂದಿಗೆ ಇತ್ಯರ್ಥ ಪಡಿಸುತ್ತದೆ. ಇದರ ಹೊರತು ಸಾಮಾನ್ಯ ಸಂದರ್ಭಗಳಲ್ಲಿ ಬೆಳೆ ನಷ್ಟಗಳನ್ನು ಜಿಲ್ಲಾ ಸಮಿತಿ ಹಾಗೂ ಸರ್ಕಾರಗಳು ಅನುಮೋದಿಸಿರುವ ಟೀಮ್ ಶೀಟ್ ಗಳಲ್ಲಿನಪೇ ಔಟ್ ಸ್ಟ್ರಕ್ಚರ್, ಡ್ಯೂರೇಷನ್, ಇನ್‍ಡೆಕ್ಸ್‍ಗಳನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಗಳು ಲೆಕ್ಕ ಹಾಕಿ ಇತ್ಯರ್ಥ ಪಡಿಸುತ್ತವೆ.
ಹಣಕಾಸು ಸಂಸ್ಥೆಗಳಿಂದ ಬೆಳೆ ಸಾಲವನ್ನು ಹೊಂದಿಲ್ಲದ ತೋಟಗಾರಿಕೆ ರೈತರು ನಿಗದಿತ ಅರ್ಜಿಯೊಂದಿಗೆ ಜಮೀನಿನ ಪಹಣಿ ಪ್ರತಿ, ಉಳಿತಾಯ ಖಾತೆ ಪಾಸ್ ಪುಸ್ತಕ,ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಸರ್ಕಾರದ ಇತರೆ ಯಾವುದೇ ಅಧಿಕೃತ ಗುರುತಿನ ಚೀಟಿ,ಸ್ವಯಂ ಘೋಷಿಸಿ ದೃಢೀಕರಿಸಿದ ಜಮೀನಿನ ಬೆಳೆ ಪತ್ರ ಹಾಗೂ ಪ್ರಿಮಿಯಂ ವಿಮಾ ಮೊತ್ತದೊಂದಿಗೆ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದು.
ಈ ಯೋಜನೆಯನ್ನು ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿಸಲು ಉದ್ದೇಶಿಸಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಯೋಜನೆಯ ಲಾಭವನ್ನು ಪಡೆಯಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಥವಾ ಕೃಷಿ ಅಧಿಕಾರಿಗಳು, ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಅಥವಾ
- ಮಂಗಳೂರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ.ಸಂಖ್ಯೆ: 8277806378, ದೂ.ಸಂಖ್ಯೆ: 0824-2423615
- ಬಂಟ್ವಾಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ.ಸಂಖ್ಯೆ:9448206393 ದೂ.ಸಂಖ್ಯೆ:08255-234102
- ಪುತ್ತೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ.ಸಂಖ್ಯೆ:9731854527 ದೂ.ಸಂಖ್ಯೆ: 08251-230905
- ಸುಳ್ಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ.ಸಂಖ್ಯೆ: 9880993238, ದೂ.ಸಂಖ್ಯೆ:08257-232020
- ಬೆಳ್ತಂಗಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ.ಸಂಖ್ಯೆ:9448336863 ದೂ.ಸಂಖ್ಯೆ: 08256-232148
ಮೂಲಕ ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.