ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ: ಜಿಲ್ಲಾಧಿಕಾರಿ
ಕಾರವಾರ, ಮೇ 19, 2022: ಪಶ್ಚಿಮ ಕ್ಷೇತ್ರ ಶಿಕ್ಷಕರ ಚುನಾವಣೆಯನ್ನು ಪಾರದರ್ಶಕವಾಗಿ ಸುಲಲಿತವಾಗಿ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜರುಗಿದ ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಅಗತ್ಯ ಕ್ರಮವನ್ನು ವಹಿಸಲು ತಹಶೀಲ್ದಾರ ಹಾಗೂ ಪ್ಲೈಯಿಂಗ್ ಸ್ಕ್ವಾಯ್ಡ್ ಗಳಿಗೆ ಸೂಚಿಸಿದರು.
ಚುನಾವಣೆ ಆಯೋಗವು ಹೊರಡಿಸಿದ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲ ಗಲಭೆಗಳಿಗೆ ಅವಕಾಶ ನೀಡದೇ ಚುನಾವಣೆ ಸುಲಲಿತವಾಗಿ ಸಾಗಲು ಕ್ರಮ ಕೈಗೊಳ್ಳಬೇಕೆಂದರು.
ಬಳಿಕ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ಸರಕಾರಿ ನೌಕರರು ಚುನಾವಣೆಯಲ್ಲಿ ಅಭ್ಯರ್ಥಿಯ ಪರವಾಗಿ ನೇರವಾಗಿ ಇಲ್ಲವೇ ಪರೋಕ್ಷವಾಗಿ ಬೆಂಬಲಿಸಿ ಮತದಾರರ ಮೇಲೆ ಪ್ರಭಾವ ಬೀರುವಂತಿಲ್ಲ ಹಾಗೂ ಮಂತ್ರಿ ಶಾಸಕರು ಚುನಾವಣೆ ಸಭೆಗಳಲ್ಲಿ ಭಾಗವಹಿಸುವಂತಿಲ್ಲವೆಂದು ಹೇಳಿದರು.
ಹೊಸ ಕಾಮಗಾರಿಗೆ ಚಾಲನೆ , ಶಂಕುಸ್ಥಾಪನೆ, ಅಡಿಗಲ್ಲು, ಉದ್ಘಾಟನೆ ಮಾಡುವಂತಿಲ್ಲ ಮಾಡಿದಲ್ಲಿ ಅಪರಾಧವಾಗುತ್ತದೆ ಎಂದು ತಿಳಿಸಿದರು.
ಪಕ್ಷಬೇಧವಿಲ್ಲದೇ ಎಲ್ಲ ಪಕ್ಷದ ಅಭ್ಯರ್ಥಿಗಳಿಗೂ ಚುನಾವಣೆ ಸಭೆ ನಡೆಸಲು ಅನುಮತಿ ನೀಡಬೇಕು. ಅಭ್ಯರ್ಥಿಗಳ ಮದ್ಯೆ ಗಲಾಟೆ ಸಂಭವಿಸದ ರೀತಿಯಲ್ಲಿ ಸೂಕ್ತ ಸಮಯ ಸ್ಥಳ ನಿಗದಿಮಾಡಿಕೊಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು.
ಚುನಾವನಾ ಸಭೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಅನುಸರಿಸಿ ಅನುಮತಿ ನೀಡಬೇಕು. ಪ್ರತಿಯನ್ನು ಅಭ್ಯರ್ಥಿಗೆ ಹಾಗೂ ಮುಂದಿನ ಕ್ರಮಕ್ಕಾಗಿ ಪೊಲೀಸ್ ಅಧಿಕಾರಿಗಳಿಗೆ ಒಂದು ಪ್ರತಿ ನೀಡಬೇಕು ಎಂದರು.
ತಹಶೀಲ್ದಾರರು ಪ್ರತಿ ತಾಲೂಕುಗಳಲ್ಲಿ ವಿಡಿಯೋ ತಂಡ ರಚಿಸಿ, ಪ್ರತಿ ಅಭ್ಯರ್ಥಿಯ ಸಭೆಗಳನ್ನು ವಿಡಿಯೋ ಮಾಡಿಟ್ಟುಕೊಂಡಿರಬೇಕು. ಚುನಾವನಾ ನೀತಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿದಿನದ ಚಟುವಟಿಕೆ ಮಾಹಿತಿಯನ್ನು ಸಲ್ಲಿಸಬೇಕು.ಪ್ರಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಅಥವಾ ಸ್ವಂತ ಸ್ಥಳದಲ್ಲಿ ಸಭೆ ನಡೆಸಲು, ಬ್ಯಾನರ್ ಬಂಟಿಕ್ಸ್, ಪ್ಲೆಕ್ಸ್ ಹಾಗೂ ಮಾದ್ಯಮ ಬಳಸುವಂತ ಸಂದರ್ಭದಲ್ಲಿ ಮೊದಲೇ ಸೂಕ್ತ ಪ್ರಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾದ್ದರಿಂದ ಆ ಕುರಿತು ನಿಗಾವಹಿಸಲು ಸೂಚಿಸಿದರು.
ಚುನಾವನಾ ಅಕ್ರಮಗಳು ನಡೆಯದಂತೆ ಕ್ರಮವಹಿಸಬೇಕು, ಅಕ್ರಮ ನಡೆದ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಎಫ್ ಐ ಆರ್ ದಾಖಲಿಸಬೇಕು. ಎಫ್ ಐ ಆರ್ ಪ್ರತಿಯನ್ನು ಪಡೆಯಬೇಕು ಎಂದು ತಿಳಿಸಿದರು.ರಾಜಕೀಯ ಪಕ್ಷಗಳು ಜಾತಿ, ಧರ್ಮ, ಭಾಷೆಯ ಮೇಲೆ ಮತ ಕೇಳುವುದು ಅಪರಾಧವಾಗಿದ್ದು ಅದಕ್ಕೆ ಅವಕಾಶ ನೀಡಬಾರದು, ಶಾಂತಿ ಸುವ್ಯವಸ್ಥೆ ಕದಡುವ ಘಟನೆಗಳಿಗೆ ಆಸ್ಪದ ನೀಡಬಾರದು ಪ್ರಚಾರಕ್ಕೂ ಮೊದಲು ಫ್ರೀ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ ಎಂಬುದನ್ನು ತಿಳಿಸಬೇಕು ಎಂದರು.ಪ್ರಿಂಟಿಂಗ್ ಪ್ರೆಸ್ ನವರಿಗೆ ಈ ಕುರಿತಾಗಿ ಮಾಹಿತಿ ನೀಡಬೇಕು. ಜಿಲ್ಲಾಮಟ್ಟದ ಸಮಿತಿಯಿಂದ ಅನುಮತಿ ಪಡೆದ ನಂತರವಷ್ಟೇ ಮುದ್ರಿಸಲು ಅವಕಾಶವಿರುತ್ತದೆ ಎಂಬುದನ್ನು ಸೂಚಿಸಬೇಕೆಂದರು.ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ, ಧಾರ್ಮಿಕ ಸಂಸ್ಥೆಗಳನ್ನು ಬಳಸಿಕೊಂಡು ಮತಪ್ರಚಾರ ನಡೆಸುವಂತಿಲ್ಲ ಅದು ಅಪರಾಧವಾಗುತ್ತದೆ ಎಂದು ತಿಳಿಸಿದರು.
ಚುನಾವನಾ ಸಿಬ್ಬಂದಿಗಳಿಗೆ ಸಂಬಂಧಿಸಿದ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡಬೇಕು. ಅಭ್ಯರ್ಥಿಗಳು ಮತದಾರರಿಗೆ ಮಾದರಿ ಬ್ಯಾಲೆಟ್ ಮುದ್ರಿಸಿ ಮತದಾನದ ಕುರಿತು ಮಾಹಿತಿ ನೀಡಲು ಅವಕಾಶವಿದೆ ಆದರೆ ನಿಗದಿತ ನಮೂನೆಯನ್ನು ಹೋಲಿಕೆಯಾಗದ ರೀತಿಯಲ್ಲಿ ಮುದ್ರಿಸಬೇಕು ಎಂದು ತಿಳಿಸಿದರು.ಚುನಾವನೆಯು ಪಾರದರ್ಶಕವಾಗಿ ಸುಲಲಿತವಾಗಿ ಸಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಇನ್ನಿತರ ಅಗತ್ಯ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಡಿವೈಎಸ್ಪಿ ವಾಲೈಂಟನ್ ಡಿಸೋಜಾ, ಸಹಾಯಕ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಹಾಗೂ ವಿವಿಧ ತಾಲೂಕುಗಳ ತಹಶೀಲ್ದಾರ ಸೇರಿದಂತೆ ಸಿಬ್ಬಂದಿಗಳು ಇದ್ದರು.