ಕಾರವಾರ: ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ
ಕಾರವಾರ ಮೇ. 4, 2022: ಮಕ್ಕಳ ದಾಖಲಾತಿಯಲ್ಲಿ ವ್ಯತ್ಯಾಸ ಗುರುತಿಸಿ ದ್ವಿದಾಖಲಾತಿ ಹೊಂದಿದ ಮಕ್ಕಳ ದಾಖಲಾತಿಯನ್ನು ಒಂದೇ ಶಾಲೆಯಲ್ಲಿ ಇರುವಂತೆ ನೋಡಿಕೊಂಡು ಸರಕಾರದ ಅನುದಾನ ಅನಗತ್ಯವಾಗಿ ಪೋಲಾಗುವುದನ್ನು ತಪ್ಪಿಸುವ ಕಾರ್ಯವಾಗಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಆರ್. ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡ ಶಿಕ್ಷಕರನ್ನು ಮರಳಿ ಇಲಾಖೆಗೆ ಕರೆತಂದು ಶಿಕ್ಷಕರ ಕೊರತೆಯನ್ನು ನೀಗಿಸುವ ಕಾರ್ಯವನ್ನು ಡಿಡಿಪಿಐ ಹಾಗೂ ಬಿಇಓಗಳು ಮಾಡಬೇಕು ಮತ್ತು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ನೋಡಿಕೊಳ್ಳಬೇಕೆಂದು ಆಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಕ್ಕಳ ದಾಖಲಾತಿ ಸಂಖ್ಯೆ ಆಧರಿಸಿ ಶಿಕ್ಷಕರ ವರ್ಗಾವಣೆ ಅಥವಾ ಸ್ಥಳ ಹೊಂದಾಣಿಕೆ ಮಾಡಿ ಶಿಕ್ಷಕರ ಕೊರತೆ ಆಗದಂತೆ ಕ್ರಮವಹಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರುವ ವ್ಯವಸ್ಥೆಯಾಗಬೇಕು. ಅಂಗನವಾಡಿ ಹಂತದಿಂದಲೇ ವಿದ್ಯಾರ್ಥಿಗಳ ಕುರಿತು ನಿಖರ ಮಾಹಿತಿ ಪಡೆಯಬೇಕು. ಬಾಲ್ಯವಿವಾಹ ತಡೆಗಟ್ಟಲು ಸ್ಥಳೀಯ ಹಂತದಲ್ಲಿಯೇ ಅದನ್ನು ಗುರುತಿಸುವ ಕಾರ್ಯವಾಗಬೇಕು. ಮಕ್ಕಳಿಗೆ ಅಗತ್ಯ ಆರೋಗ್ಯ ಚಿಕಿತ್ಸೆ, ತಿಳುವಳಿಕೆ ನೀಡುವಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಡಿಡಿಪಿಐಗೆ ನಿರ್ದೇಶನ ನೀಡಿದರು.
ಮಕ್ಕಳ ಕಲಿಕೆಯ ವಿಚಾರವಾಗಿ ಈಗಾಗಲೇ ಪಠ್ಯಪುಸ್ತಕ ವಿತರಿಸಲು ಕ್ರಮಕೈಗೊಳ್ಳಲಾಗಿದ್ದು, ಸಮವಸ್ತ್ರವೂ ಹಂಚಿಕೆಯಾಗುತ್ತದೆ. ಮಕ್ಕಳ ದಾಖಲಾತಿಯನ್ನು ಮಾಡಿಕೊಂಡು ಸ್ಯಾಟ್ಸ್ ತಂತ್ರಾಂಶದಲ್ಲಿ ಅವರ ವಿವರಗಳನ್ನು ಧೃಡೀಕರಿಸುವ ವ್ಯವಸ್ಥೆಯಾಗಬೇಕು ನಿಯಮಿತವಾಗಿ ಅದರ ಅಪ್ಡೇಟ್ ಸಹ ಮಾಡುತ್ತಿರಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಶಾಲಾ ನೋಂದಣಿ ನವೀಕರಣ ಮತ್ತು ಹೊಸ ಶಾಲೆಗಳ ಚಾಲನೆಗೆ ಒಪ್ಪಿಗೆ ಕೇಳಿ ಬಂದಂತಹ ಅರ್ಜಿಯನ್ನು ಸರಕಾರದ ನಿಯಮಾನುಸಾರ ಕೂಲಂಕುಷವಾಗಿ ಪರಿಶೀಲಿಸಿ ಕಟ್ಟಡ ಹಾಗೂ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲಿಸಿ ತೃಪ್ತಿಕರವಾಗಿದ್ದರೆ ಮಾತ್ರ ಅಫಿಡೆವಿಟ್ ಪಡೆದುಕೊಂಡು ಅನುಮತಿ ನೀಡಬೇಕು ಇಲ್ಲವಾದಲ್ಲಿ ಯಾವುದೇ ರೀತಿಯ ಮರ್ಜಿಗೆ ಒಳಪಡುವ ಅಗತ್ಯವಿಲ್ಲ ಅಂತಹ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಮುಖಾಂತರ ಕೈಗೊಂಡ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡ ಬಳಿಕ ಮುಂದಿನ ಸಭೆಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡ ಕಾಮಗಾರಿಗಳ ಕುರಿತು ನಿಖರ ಮಾಹಿತಿ ಹಾಗೂ ನೈಜ ದತ್ತಾಂಶಗಳನ್ನು ಒದಗಿಸಬೇಕೆಂದು ಡಿಡಿಪಿಐ ಮತ್ತು ಬಿಇಓ ಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಹಾಗೂ ಜಿಲ್ಲಾ ಮಟ್ಟದ ಶಿಕ್ಷಣ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.