ರಸ್ತೆ ಕಾಮಗಾರಿ: ಸಂಚಾರಕ್ಕೆ ಬದಲಿ ವ್ಯವಸ್ಥೆ
ಮಂಗಳೂರು,ಏ.22, 2022: ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಟಿ.ಎಂ.ಎ. ಪೈ ಹಾಲ್‍ನಿಂದ ಕೊಡಿಯಲ್ಗುತ್ತು ಮುಖ್ಯ ರಸ್ತೆಯವರೆಗೆ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿ ಕೈಗೊಂಡ ಪ್ರಯುಕ್ತ ಆ ರಸ್ತೆಗಳಲ್ಲಿ ಮೋಟಾರು ವಾಹನ ಕಾಯ್ದೆ ಪ್ರಕಾರ ಏ.19 ರಿಂದ ಜೂನ್.2 ರವರೆಗೆ 45 ದಿನಗಳ ಕಾಲ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ವಿವರ ಇಂತಿದೆ:
- ಕಾಮಗಾರಿ ನಡೆಯುವ ವೇಳೆ ಬಿಜೈ ಜಂಕ್ಷನ್ ಕಡೆಯಿಂದ ಎಂ.ಜಿ ರಸ್ತೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಬಿಜೈ ಜಂಕ್ಷನ್ ನಿಂದ ನೇರವಾಗಿ ಕರಂಗಲ್ಪಾಡಿ ಜಂಕ್ಷನ್ ಕಡೆಗೆ ಚಲಿಸಿ ನಂತರ ಬಲಕ್ಕೆ ತಿರುಗಿ ಪಿ.ವಿ.ಎಸ್ ಜಂಕ್ಷನ್ ಮೂಲಕ ರಸ್ತೆ ಪ್ರವೇಶಿಸುವುದು.
- ಕರಂಗಲ್ಪಾಡಿ ಕಡೆಯಿಂದ ಬಂದು ಕೊಡಿಯಲ್ ಗುತ್ತು ಮುಖ್ಯ ರಸ್ತೆ ಮೂಲಕ ಎಂ.ಜಿ. ರಸ್ತೆಯನ್ನು ಪ್ರವೇಶಿಸುವ ಎಲ್ಲ ವಾಹನಗಳು ಕರಂಗಲ್ಪಾಡಿ ಜಂಕ್ಷನ್ ನಿಂದ ನೇರವಾಗಿ ಬಿಜೈ ಜಂಕ್ಷನ್ ಕಡೆಗೆ ಚಲಿಸಿ ನಂತರ ಎಡಕ್ಕೆ ತಿರುಗಿ ಲಾಲ್ ಬಾಗ್ ಜಂಕ್ಷನ್ ಮೂಲಕ ಎಂ.ಜಿ ರಸ್ತೆ ಪ್ರವೇಶಿಸುವುದು.
- ಎಂ.ಜಿ ರಸ್ತೆಯಿಂದ ಕೊಡಿಯಲ್ ಗುತ್ತು ಮುಖ್ಯ ರಸ್ತೆಯ ಮೂಲಕ ಕರಂಗಲ್ಪಾಡಿ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಎಂ.ಜಿ ರಸ್ತೆಯಲ್ಲಿ ನೇರವಾಗಿ ಚಲಿಸಿ ಪಿ.ವಿ.ಎಸ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಕರಂಗಲ್ಪಾಡಿ ಕಡೆಗೆ ಹೋಗುವುದು.
- ಎಂ.ಜಿ. ರಸ್ತೆಯಿಂದ ಕೊಡಿಯಲ್ ಗುತ್ತು ಮುಖ್ಯ ರಸ್ತೆ ಮೂಲಕ ಬಿಜೈ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಎಂ.ಜಿ ರಸ್ತೆಯಲ್ಲಿ ನೇರವಾಗಿ ಲಾಲ್‍ಬಾಗ್ ಜಂಕ್ಷನ್ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ಬಿಜೈ ಜಂಕ್ಷನ್ ಕಡೆಗೆ ಸಂಚರಿಸುವಂತೆ ಮಂಗಳೂರು ನಗರದ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.