ಕಿಸಾನ್ ಕ್ರೆಡಿಟ್ ಕಾರ್ಡ್‍ನ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಕರೆ

 ಕಿಸಾನ್ ಕ್ರೆಡಿಟ್ ಕಾರ್ಡ್‍ನ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಕರೆ
Share this post

ಮಂಗಳೂರು,ಏ.20, 2022: ಜಿಲ್ಲೆಯ ಪ್ರತಿಯೊಬ್ಬ ರೈತರು ರೈತಸ್ನೇಹಿ ಯೋಜನೆಯಾದ ಕಿಸಾನ್ ಕ್ರೆಡಿಟ್ ಕಾರ್ಡ್‍ನ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕರೆ ನೀಡಿದರು.

ಅವರು ಮಂಗಳವಾರ ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವಿವಿಧ ಬ್ಯಾಂಕರುಗಳ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಏ.24ರಂದು ನಡೆಯುವ ಪಂಚಾಯತ್ ರಾಜ್ ದಿನದಂದು ಪ್ರಧಾನ ಮಂತ್ರಿಗಳು ಮಹಾಗ್ರಾಮ ಸಭಾ ಕಾರ್ಯಕ್ರಮದಲ್ಲಿ ಕಿಸಾನ್ ಭಾಗಿದಾರಿ, ಪ್ರಾಥಮಿಕ ಹಮಾರಿ ಎಂಬ ಬೃಹತ್ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ, ಈ ಆಂದೋಲನ ಮೆ.1ರ ವರೆಗೆ ನಡೆಯಲಿದೆ ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಿ.ಎಂ ಕಿಸಾನ್ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆಯುವಂತೆ ತಿಳಿಸಿದರು.

ಬ್ಯಾಂಕ್, ಪಂಚಾಯತ್ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅರ್ಹ ಫಲಾನುಭವಿಗಳಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆ ಸಾಲ ಪಡೆಯಲು ಪ್ರೋತ್ಸಾಹ ನೀಡಬೇಕು, ಸಾಮಾಜಿಕ ಜಾಲತಾಣಗಳ ಮೂಲಕ ಈ ಯೋಜನೆಯ ಬಗ್ಗೆ ಪ್ರಚಾರ ಪಡಿಸಬೇಕು, ಜತೆಗೆ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಗ್ರಾಮೀಣ ಭಾಗದ ಬ್ಯಾಂಕುಗಳು, ಸಹಕಾರಿ ಸಂಘಗಳು ಈ ಬಗ್ಗೆ ಹೆಚ್ಚಿನ ಒಲವು ತೋರಿ ಜನರು ಬೆಳೆ ಸಾಲ ಪಡೆಯುವಂತೆ ಪ್ರೋತ್ಸಾಹಿಸಬೇಕು, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಹಾಗೂ ರಾಷ್ಟ್ರಿಕೃತ ಬ್ಯಾಂಕ್ ಮತ್ತು ಇತರೆ ಖಾಸಗೀ ಬ್ಯಾಂಕುಗಳಲ್ಲಿ ಶೇಕಡಾ 4 ರಷ್ಟು ಬಡ್ಡಿ ದರದಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದರು.

ಪಶುಸಂಗೋಪನೆ, ಮೀನುಗಾರಿಕೆ, ಕುಕ್ಕುಟೋದ್ಯಮ ಇತ್ಯಾದಿಗಳಲ್ಲಿ ತೊಡಗಿಸಿಕೊಂಡವರೂ ಕೂಡ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ, ಈ ಆಂದೋಲನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪುತ್ತೂರು ವಿಭಾಗಕ್ಕೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯಕ್ ಹಾಗೂ ಮಂಗಳೂರು ವಿಭಾಗಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ ಅವರನ್ನು ನೂಡಲ್ ಅಧಿಕಾರಿಗಳಾಗಿ ಈ ಸಂದರ್ಭದಲ್ಲಿ ನಿಯೋಜಿಸಿದರು.

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯು ಪ್ರತಿಯೊಬ್ಬ ಪಿ.ಎಂ. ಕಿಸಾನ್ ಫಲಾನುಭವಿಗಳನ್ನೂ ತಲುಪಬೇಕು ಆ ಮೂಲಕ ನಮ್ಮ ಜಿಲ್ಲೆಯಲ್ಲಿ ಎಲ್ಲಾ ಅರ್ಹ ರೈತ ಬಾಂಧವರು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ಆ ಮೂಲಕ ಯೋಜನೆಯ ಲಾಭ ಪಡೆದು ಆಂದೋಲನವನ್ನು ಯಶಸ್ವಿಯಾಗಿಸಬೇಕು ಎಂದು ಕರೆ ನೀಡಿದರು.

ನಬಾರ್ಡ್ ಅಧಿಕಾರಿ ಸಂಗೀತ ಕರ್ತ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಹಾಗೂ ಇತರೆ ರಾಷ್ಟ್ರಿಕೃತ ಮತ್ತು ಖಾಸಗಿ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!