ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಎಲ್ಲರಿಗೂ ಮಾದರಿ: ಜಿಲ್ಲಾಧಿಕಾರಿ

 ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಎಲ್ಲರಿಗೂ ಮಾದರಿ: ಜಿಲ್ಲಾಧಿಕಾರಿ
Share this post

ಉಡುಪಿ, ಮಾ 15, 2022: ಕೋವಿಡ್ ಸೇರಿದಂತೆ ಇತರೆ ತುರ್ತು ಸಂದರ್ಭಗಳಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತದೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅವರ ಕಾರ್ಯ ಇತರೆ ಎಲ್ಲರಿಗೂ ಮಾದರಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದರು.

ಅವರು ಇಂದು ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಆಶಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಕೋವಿಡ್ ಸೋಂಕಿನ ಮೂರು ಅಲೆಗಳ ಸಂದರ್ಭದಲ್ಲಿಯೂ ಅದರ ಹರಡುವಿಕೆ, ತಡೆಗಟ್ಟುವುದು ಸೇರಿದಂತೆ ನಿರ್ವಹಣಾ ಕಾರ್ಯದಲ್ಲಿ ಆಶಾ ಕಾರ್ಯಕರ್ತರು ಸೋಂಕಿತರ ಮನೆ ಮನೆಗೂ ಭೇಟಿ ಮಾಡಿ, ಅವರುಗಳ ಯೋಗ ಕ್ಷೇಮ ವಿಚಾರಿಸುವುದರ ಜೊತೆಗೆ ಆರೋಗ್ಯ ಶಿಕ್ಷಣದ ಮಾಹಿತಿಗಳನ್ನು ನೀಡಿದ್ದಾರೆ ಎಂದರು.

ನಾವು ಹಲವು ಬಾರಿ ಕೋವಿಡ್ ನಿಯಂತ್ರಣ ಸಂಬAಧ ಗ್ರಾಮೀಣ ಪ್ರದೇಶದ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ತಪ್ಪದೇ ಕಂಡುಬರುತ್ತಿದ್ದರು. ಅಲ್ಲದೇ ಸ್ವಯಂ ಆಸಕ್ತಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿರುವುದನ್ನು ಕಂಡಿದ್ದೇವೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ ನಾಗಭೂಷಣ ಉಡುಪ ಹೆಚ್. ಮಾತನಾಡಿ, ಕೋವಿಡ್ ಸಮಯದಲ್ಲಿ ಭಾರತೀಯ ಸೇನೆ ಗಡಿಭಾಗದಲ್ಲಿ ಯಾವ ರೀತಿ ಹೋರಾಡಿದೆಯೋ ಅದೇ ರೀತಿಯಲ್ಲಿ ನಮ್ಮ ಆಶಾ ಕಾರ್ಯಕರ್ತರೂ ಕೋವಿಡ್ ಸಮಯದಲ್ಲಿ ಹೋರಾಡಿ ಸೋಂಕನ್ನು ನಿಯಂತ್ರಿಸಲು ಶ್ರಮಿಸಿದ್ದಾರೆ. ಕೋವಿಡ್ ಪ್ರಮಾಣವನ್ನು ತಗ್ಗಿಸಲು ಮನೆಮನೆಗೆ ತೆರಳಿ ಲಸಿಕೆಯನ್ನು ಪಡೆಯಲು ಜನರಿಗೆ ಪೇರೇಪಿಸುವುದರೊಂದಿಗೆ ಜಿಲ್ಲೆಯನ್ನು ಕೋವಿಡ್ ಶೂನ್ಯಕ್ಕೆ ತರುವಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಜಿಲ್ಲಾ ಸರಕಾರಿ ನೌಕರರ ಕ್ರೆಡಿಟ್ ಅನ್ನುವುದು ಆಶಾ ಕಾರ್ಯಕರ್ತರಿಗೆ ಸಲ್ಲಬೇಕು. ಕೋವಿಡ್ ಪ್ರಮಾಣ ಇಳಿಕೆಯಲ್ಲಿ ಅವರ ಶ್ರಮ ಬಹಳಷ್ಟಿದೆ. ಆಶಾ ಕಾರ್ಯಕರ್ತರಂತೆ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಕಾರಣರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ರತ್ನಾ, ಪ್ರಕಾಶಿಣಿ, ಲಕ್ಷ್ಮೀ ಎಸ್.ನಾಯಕ್, ವಿನೋದಾ ಜೆ.ಆಚಾರ್ಯ, ಜಯಲಕ್ಷ್ಮೀ ಎಸ್., ಕುಸುಮಾ, ವಿಜಯಲಕ್ಷ್ಮೀ, ಮಂಜುಳಾ, ವಿಜಯಾ, ಚೈತನ್ಯಾ, ನೀಲಾವತಿ, ವಿನುತಾ ವಿ.ಮರಾಠೆ, ಮಾಲಿನಿ ಶೆಟ್ಟಿ, ರೇಷ್ಮಾ ಆರ್.ಮೂಲ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ ರಚನಾ, ಡಾ ಪಿ.ವಿ.ಭಂಡಾರಿ, ಡಾ ಅರ್ಚನಾ, ಡಾ.ಸೌಜನ್ಯಾ ಹೆಗ್ಡೆ ಆಶಾ ಕಾರ್ಯಕರ್ತೆಯರಿಗೆ ಹೆಚ್.ಡಬ್ಲೂö್ಯ.ಸಿ ಮಲ್ಟಿ ಸ್ಕಿಲ್ಲಿಂಗ್ ತರಬೇತಿಯನ್ನು ನೀಡಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ ಎಂ.ಜಿ.ರಾಮ, ಕುಟುಂಬ ಕಲ್ಯಾಣಾಧಿಕಾರಿ ಡಾ ರಾಮರಾವ್, ಕೋವಿಡ್ ನೋಡಲ್ ಅಧಿಕಾರಿ ಡಾ ಪ್ರಶಾಂತ್ ಭಟ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ್ ಸಂಜು, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ ಕೃಷ್ಣಾನಂದ ಶೆಟ್ಟಿ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ ರಾಜೇಶ್ವರಿ, ಆಶಾ ಮೇಲ್ವಿಚಾರಕಿ ರೀಟಾ ಉಪಸ್ಥಿತರಿದ್ದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ನಾಗರತ್ನಾ ಸ್ವಾಗತಿಸಿ, ವಂದಿಸಿದರೆ, ಕಾರ್ಯಕ್ರಮ ಸಂಯೋಜಕಿ ಡಾ. ಅಂಜಲಿ ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!