ಮಾ. 12 ರಂದು “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಗೆ ಚಾಲನೆ
ಉಡುಪಿ, ಮಾ 10, 2022: ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಕಂದಾಯ ಇಲಾಖೆ ಮನೆ ಬಾಗಿಲಿಗೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಗೆ ಮಾರ್ಚ್ 12 ರಂದು ಬೆಳಗ್ಗೆ 11 ಗಂಟೆಗೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಕನ್ನಾರುಕೋಡಿ ಇಲ್ಲಿ ಪರಿಶಿಷ್ಟ ಪಂಗಡದ ರೈತರಿಗೆ ಕಂದಾಯ ದಾಖಲೆಗಳನ್ನು ನೀಡುವ ಮೂಲಕ ಉಡುಪಿ ಶಾಸಕ ರಘುಪತಿ ಭಟ್ ಚಾಲನೆ ನೀಡಲಿದ್ದಾರೆ.
ಇನ್ನುಳಿದ ಕಂದಾಯ ಗ್ರಾಮಗಳಲ್ಲಿ ಆಯಾ ಗ್ರಾಮದ ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಸಹಾಯಕರ ಮೂಲಕ ಈ ಯೋಜನೆಯನ್ನು ಎಲ್ಲಾ ರೈತ ಕುಟುಂಬಗಳಿಗೆ ತಲುಪಿಸಲಾಗುತ್ತದೆ. ಸದ್ರಿ ದಿನದಂದು ದಾಖಲೆಗಳನ್ನು ಪಡೆಯದ ರೈತರಿಗೆ ಮಾ. 21 ರಿಂದ 26 ರ ಒಳಗೆ ತಲುಪಿಸಲಾಗುವುದು ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.